ಮುಂಬೈ: ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯೊಬ್ಬರ ಮೇಲೆ ಅಸಭ್ಯವಾಗಿ ವರ್ತಿಸಿದರೆ ಅದರಲ್ಲಿ ಮಹಿಳೆಯ ಪಾತ್ರವಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಆಕೆ ತಪ್ಪಿತಸ್ಥೆ ಎಂದು ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮುಂಬೈ ನ್ಯಾಯಾಲಯವು 2007 ರ ಹಾಲಿವುಡ್ ನಟ ರಿಚರ್ಡ್ ಗೇರ್ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಮುತ್ತುಕೊಟ್ಟ ಪ್ರಕರಣದಲ್ಲಿ ತೀರ್ಪು ನೀಡಿದೆ.
2007ರಲ್ಲಿ ಸಾರ್ವಜನಿಕ ವೇದಿಕೆ ಮೇಲೆ ಹಾಲಿವುಡ್ ನಟ ರಿಚರ್ಡ್ ಗೇರ್ ನಟಿ ಶಿಲ್ಪಾ ಶೆಟ್ಟಿಗೆ ಮುತ್ತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್ ಸಿ ಜಾಧವ್, ಈ ಘಟನೆಯಲ್ಲಿ ಶಿಲ್ಪಾ ಶೆಟ್ಟಿ ಕಡೆಯಿಂದ ಅಶ್ಲೀಲತೆ ಅಥವಾ ಅಸಭ್ಯತೆ ಕಂಡುಬರುವುದಿಲ್ಲ ಎಂದು ಹೇಳಿ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶವನ್ನು ಎತ್ತಿಹಿಡಿದರು.
ನ್ಯಾಯಾಧೀಶರ ಆದೇಶ ವಿವರವಾಗಿ ಇಂದು ಲಭ್ಯವಾಗಿದೆ. 2007ರಲ್ಲಿ ರಾಜಸ್ತಾನದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಹಾಲಿವುಡ್ ನಟ ರಿಚರ್ಡ್ ಗೇರ್ ನಟಿ ಶಿಲ್ಪಾ ಶೆಟ್ಟಿಗೆ ಸಾರ್ವಜನಿಕ ವೇದಿಕೆ ಮೇಲೆ ಕಿಸ್ ನೀಡಿದ್ದರು.
ಶಿಲ್ಪಾ ಶೆಟ್ಟಿ ವಿರುದ್ಧ ಐಪಿಸಿ ಸೆಕ್ಷನ್ 292 ರ ಅಡಿಯಲ್ಲಿ ಅಶ್ಲೀಲತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯಡಿಯಲ್ಲಿ ಆರೋಪಗಳನ್ನು ಹೊರಿಸಲು ಸಾಕಷ್ಟು ಪುರಾವೆಗಳಿವೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದ್ದರು. ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದರು.
ಆದರೆ, ಶಿಲ್ಪಾ ಶೆಟ್ಟಿ ಪರ ವಕೀಲ ಪ್ರಶಾಂತ್ ಪಾಟೀಲ್ ಅವರು ಕೆಳ ನ್ಯಾಯಾಲಯದ ಆದೇಶವು ಸರಿಯಾಗಿದ್ದು ಕಾನೂನುಬದ್ಧವಾಗಿದೆ ಎಂದು ವಾದಿಸಿದರು. ಆರೋಪಗಳನ್ನು ರೂಪಿಸಲು ಪುರಾವೆಗಳಿಲ್ಲ ಮತ್ತು ಸರಿಯಾದ ಕ್ರಮದಲ್ಲಿಲ್ಲ. ಹೀಗಾಗಿ ಪರಿಷ್ಕರಣೆ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಪಾಟೀಲ್ ವಾದಿಸಿದರು.
ಎರಡೂ ಕಡೆಯ ವಾದವನ್ನು ಆಲಿಸಿದ ನಂತರ, ಏಪ್ರಿಲ್ 3 ರಂದು ನ್ಯಾಯಾಲಯವು, “ಮಹಿಳೆಯನ್ನು ರಸ್ತೆಯಲ್ಲಿ ಹಿಡಿಯುವುದು ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಸ್ಪರ್ಶಿಸಿದರೆ ಮಹಿಳೆ ಅದರಲ್ಲಿ ಭಾಗಿಯಾಗಿದ್ದಾಳೆ ಎಂದು ದೂಷಿಸಿ ಆಕೆ ತಪ್ಪಿತಸ್ಥಳು ಎಂದು ಹೇಳಲು ಸಾಧ್ಯವಿಲ್ಲ. ಆಕೆಯನ್ನು ಕಾನೂನು ಕ್ರಮಕ್ಕೆ ಹೊಣೆಗಾರರನ್ನಾಗಿ ಮಾಡುವುದು ಅಪರಾಧವಾಗುತ್ತದೆ ಎಂದು ಹೇಳಿತು.
ಶಿಲ್ಪಾ ಶೆಟ್ಟಿ ಕಡೆಯಿಂದ ಅಶ್ಲೀಲತೆ ಕಂಡುಬರುತ್ತಿಲ್ಲ. ದೂರುದಾರರ ಪ್ರಾಥಮಿಕ ಸಾಕ್ಷ್ಯದಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
Advertisement