ಮುಂಬೈ: ಮಾದಕ ವಸ್ತು ಸಾಗಟ ಪ್ರಕರಣದಲ್ಲಿ ಬಾಲಿವುಡ್ ನ ನಟಿಯೊಬ್ಬರು ದುಬೈನಲ್ಲಿ ಜೈಲು ಸೇರಿದ್ದಾರೆ. ಟ್ರೋಫಿಯಲ್ಲಿ ಬಚ್ಚಿಟ್ಟಿದ್ದ ಮಾದಕ ವಸ್ತು ಸಾಗಿಸುತ್ತಿರುವುದು ಪತ್ತೆಯಾದ ನಂತರ ಸಡಕ್ -2 ನಟಿ ಕ್ರಿಸನ್ ಪೆರೇರಾ ಸಿಕ್ಕಿ ಬಿದಿದ್ದು, ನಂತರ ಯುಎಇಯ ಶಾರ್ಜಾ ಜೈಲು ಸೇರಿದ್ದಾರೆ. ಈ ಪ್ರಕರಣದಲ್ಲಿ ಆಕೆಯನ್ನು ಸಿಲುಕಿಸಿದ್ದ ವ್ಯಕ್ತಿ ಸೇರಿದಂತೆ ಮತ್ತಿಬ್ಬರೂ ಮುಂಬೈ ಪೊಲೀಸರು ಬಂಧಿಸಿದ್ದರೂ ಆಕೆ ಇದೀಗ ಜೈಲು ಸೇರುವಂತಾಗಿದೆ.
ಸೋಮವಾರ ಆಕೆಯ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಏಪ್ರಿಲ್ 1 ರಿಂದ ಜೈಲಿನಲ್ಲಿರುವ 27 ವರ್ಷದ ಕ್ರಿಸನ್ ಪೆರೇರಾ ನಿರಪರಾಧಿಯಾಗಿದ್ದು, ದುಬೈ ಜೈಲಿನಿಂದ ಆಕೆಯನ್ನು ಆದಷ್ಟು ಬೇಗ ಬಿಡುಗಡೆಗೊಳಿಸಬೇಕೆಂದು ಆಕೆಯ ಸಂಬಂಧಿಕರು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಮಗಳ ಸುರಕ್ಷಿತ ಬಿಡುಗಡೆಗೆ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವರಿಗೆ ಮನವಿ ಮಾಡುತ್ತಿದ್ದೇವೆ. ಮುಂಬೈ ಪೊಲೀಸರ ತನಿಖೆಯ ನಂತರ ಈ ಪ್ರಕರಣದಲ್ಲಿಆಕೆಯನ್ನು ಸಿಲುಕಿಸಲಾಗಿದೆ ಎಂಬುದು ಸ್ಪಷ್ಪವಾಗಿದೆ ಎಂದು ಆಕೆಯ ತಾಯಿ ಪ್ರಮೀಳಾ ಪೆರೇರಾ ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಅಪರಾಧ ವಿಭಾಗದ ಪೊಲೀಸರು, ಬೊರಿವಲಿಯ ಬೇಕರಿ ಮಾಲೀಕ ಆಂಥೋನಿ ಪಾಲ್ (35) ಮತ್ತು ಆತನ ಸಹಚರ ಹಾಗೂ ಬ್ಯಾಂಕರ್ ರಾಜೇಶ್ ಬುಭಾಟೆ (34) ಅಲಿಯಾಸ್ ರವಿಯನ್ನು ಬಂಧಿಸಿದ್ದಾರೆ. ಪೆರೇರಾ ಕುಟುಂಬದ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಕ್ರಿಸನ್ ಪೆರೇರಾ ದುಬೈಗೆ ತೆರಳುವ ಮೊದಲು ಡ್ರಗ್ಸ್ ಮಿಶ್ರಿತ ಕೇಕ್ ಮತ್ತು ಟ್ರೋಫಿಗಳನ್ನು ನೀಡಿರುವುದಾಗಿ ಆರೋಪಿಗಳನ್ನು ತಪ್ಪೊಪ್ಪಿಕೊಂಡಿದ್ದಾರೆ.
ನಟಿ ಕ್ರಿಸನ್ ಮುಂಬರುವ "ಸಡಕ್ 2", "ಬಾಟ್ಲಾ ಹೌಸ್", ವೆಬ್ ಸರಣಿ "ಥಿಂಕಿಸ್ತಾನ್" ಸೇರಿದಂತೆ ಹಲವಾರು ನಾಟಕಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮುಂಬೈನ ಬೊರಿವಲಿ ಉಪನಗರದಲ್ಲಿ ಕುಟುಂಬದೊಂದಿಗೆ ಕ್ರಿಸನ್ ವಾಸಿಸುತ್ತಿದ್ದಾರೆ.
Advertisement