‘ಬೊಗಳುತ್ತಾರೆ, ಕಚ್ಚುವುದಿಲ್ಲ ಎಂದಿದ್ದ ನಟ ಪ್ರಕಾಶ್​ ರಾಜ್‌ಗೆ ಅರ್ಬನ್ ನಕ್ಸಲ್ ಎಂದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ನಟ ಪ್ರಕಾಶ್ ರಾಜ್ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಟೀಕಿಸಿದ ನಂತರ, ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಕಟುವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ತಮ್ಮ ಚಿತ್ರವು ಅರ್ಬನ್ ನಕ್ಸಲರ ನಿದ್ದೆಯನ್ನು ಕೆಡಿಸಿದೆ ಎಂದು ಹೇಳಿದ್ದಾರೆ.
ಪ್ರಕಾಶ್ ರಾಜ್ - ವಿವೇಕ್ ರಂಜನ್ ಅಗ್ನಿಹೋತ್ರಿ
ಪ್ರಕಾಶ್ ರಾಜ್ - ವಿವೇಕ್ ರಂಜನ್ ಅಗ್ನಿಹೋತ್ರಿ
Updated on

ಮುಂಬೈ: ನಟ ಪ್ರಕಾಶ್ ರಾಜ್ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಟೀಕಿಸಿದ ನಂತರ, ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಕಟುವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ತಮ್ಮ ಚಿತ್ರವು ಅರ್ಬನ್ ನಕ್ಸಲರ ನಿದ್ದೆಯನ್ನು ಕೆಡಿಸಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಮಾತನಾಡಿದ್ದ ಪ್ರಕಾಶ್ ರಾಜ್, ‘ಅವರು ಪಠಾಣ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದುಕೊಂಡಿದ್ದರು. ಆದರೆ, ಈ ಚಿತ್ರ ಅದನ್ನು ಮೀರಿ 700 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮೂರ್ಖರು, ಮತಾಂಧರು ಪಠಾಣ್​ ಸಿನಿಮಾವನ್ನು ಬ್ಯಾನ್ ಮಾಡಲು ಬಯಸಿದ್ದರು. ಆದರೆ, ಮೋದಿ ಕುರಿತಾದ ಸಿನಿಮಾಗೆ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಸಲು ಅವರಿಂದ ಸಾಧ್ಯವಾಗಿಲ್ಲ. ಅವರು ಬೊಗಳುತ್ತಾರೆ, ಕಚ್ಚುವುದಿಲ್ಲ’ ಎಂದಿದ್ದರು.

ಇದಕ್ಕೆ ಕಿಡಿಕಾರಿರುವ ವಿವೇಕ್ ಅಗ್ನಿಹೋತ್ರಿ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದ್ದು, 'ದಿ ಕಾಶ್ಮೀರ್ ಫೈಲ್ಸ್ ಎಂಬ ಸಣ್ಣ ಹಾಗೂ ಸಾಮಾನ್ಯ ಜನರ ಚಿತ್ರವು ಅರ್ಬನ್ ನಕ್ಸಲರಿಗೆ ಅದೆಷ್ಟು ನಿದ್ರೆಯಿಲ್ಲದ ರಾತ್ರಿಗಳನ್ನು ನೀಡಿದೆ ಎಂದರೆ ಅವರಲ್ಲೊಬ್ಬರು ಒಂದು ವರ್ಷದ ಬಳಿಕವೂ ಚಿತ್ರದಿಂದ ತೊಂದರೆಗೊಳಗಾಗುತ್ತಿದ್ದಾರೆ. ಸಿನಿಮಾದ ವೀಕ್ಷಕರನ್ನು ಬೊಗಳುವ ನಾಯಿಗಳು ಎಂದು ಕರೆದಿದ್ದಾರೆ. ಮತ್ತು ಶ್ರೀ ಅಂಧಕಾರ್ ರಾಜ್, ನಾನು ಭಾಸ್ಕರ್ ಅನ್ನು ಹೇಗೆ ಪಡೆಯಲಿ, ಅವಳು/ಅವನು ನಿನ್ನವರೇ. ಎಂದೆಂದಿಗೂ' ಎಂದು ಹೇಳಿದ್ದಾರೆ.

ಅವರು ಕೇರಳದ ಮಾತೃಭೂಮಿ ಇಂಟರ್‌ನ್ಯಾಷನಲ್ ಫೆಸ್ಟಿವಲ್ ಆಫ್ ಲೆಟರ್ಸ್‌ನಲ್ಲಿ ನಡೆದ ಲೈವ್ ಚಾಟ್ ಸೆಷನ್‌ನಿಂದ ಪ್ರಕಾಶ್ ರಾಜ್ ಅವರ ವಿಡಿಯೋ ಕ್ಲಿಪ್ ಅನ್ನು ಸಹ ಹಂಚಿಕೊಂಡಿದ್ದಾರೆ. ಅಲ್ಲಿ ಅವರು 'ದಿ ಕಾಶ್ಮೀರ್ ಫೈಲ್ಸ್' ಅನ್ನು ನಾನ್ ಸೆನ್ಸ್ ಚಿತ್ರ ಎಂದು ಕರೆದಿದ್ದರು.

ಮುಂದುವರಿದು, ‘ಕಾಶ್ಮೀರ್ ಫೈಲ್ಸ್​ ನಾನ್‌ಸೆನ್ಸ್ ಸಿನಿಮಾ. ಅದನ್ನು ನಿರ್ಮಾಣ ಮಾಡಿದ್ದು ಯಾರೆನ್ನುವುದು ನಿಮಗೆ ಗೊತ್ತು. ಅಂತರರಾಷ್ಟ್ರಿಯ ಜ್ಯೂರಿಗಳು ಚಿತ್ರವನ್ನು ತೆಗಳಿದರು. ಹಾಗಿದ್ದರೂ ಅವರಿಗೆ ನಾಚಿಕೆಯಾಗುವುದಿಲ್ಲ. ಆದರೂ, ನಿರ್ದೇಶಕರು ನಮ್ಮ ಚಿತ್ರಕ್ಕೆ ಇನ್ನೂ ಏಕೆ ಆಸ್ಕರ್ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಅವರಿಗೆ ಭಾಸ್ಕರ್ ಪ್ರಶಸ್ತಿ ಕೂಡ ಸಿಗುವುದಿಲ್ಲ. ಇಲ್ಲಿ ನೀವು ಇಂತಹ ಚಿತ್ರಗಳನ್ನು ಮಾಡಬಹುದು. ಆದರೆ, ಎಲ್ಲಾ ಬಾರಿಯೂ ಜನರನ್ನು ಮೂರ್ಖರನ್ನಾಗಿ ಮಾಡಲು ಆಗುವುದಿಲ್ಲ’ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ವಿವೇಕ್ ವಿಡಿಯೋವನ್ನು ಪೋಸ್ಟ್ ಮಾಡಿದ್ದು, 'ಈ ಎಲ್ಲಾ ಅರ್ಬನ್ ನಕ್ಸಲರು ಮತ್ತು ಇಸ್ರೇಲ್‌ನಿಂದ ಬಂದ ಲೆಜೆಂಡರಿ ಚಲನಚಿತ್ರ ನಿರ್ದೇಶಕರಿಗೆ ನಾನು ಸವಾಲು ಹಾಕುತ್ತೇನೆ. ನನ್ನ ಚಿತ್ರದ ಯಾವುದೇ ಒಂದು ಶಾಟ್, ಘಟನೆ ಅಥವಾ ಸಂಭಾಷಣೆ ಸಂಪೂರ್ಣವಾಗಿ ನಿಜವಲ್ಲ ಎಂದು ಸಾಬೀತುಪಡಿಸಿದರೆ, ನಾನು ನಿರ್ದೇಶನವನ್ನು ತ್ಯಜಿಸುತ್ತೇನೆ' ಎಂದು ಹೇಳಿದ್ದಾರೆ.

ಪ್ರತಿ ಬಾರಿಯೂ ಭಾರತದ ವಿರುದ್ಧ ನಿಲ್ಲುವ ಇವರು ಯಾರು? ಇದೇ ಜನರು, ಮೋಪ್ಲಾಗಳು ಮತ್ತು ಕಾಶ್ಮೀರದ ಸತ್ಯವನ್ನು ಹೊರಬರಲು ಎಂದಿಗೂ ಬಿಡಲಿಲ್ಲ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com