
ಮುಂಬೈ: 'ಪಠಾಣ್' ಮತ್ತು 'ಜವಾನ್'ನ ಯಶಸ್ಸಿನೊಂದಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಐಎಂಡಿಬಿಯ 2023ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಟಾಪ್ 10 ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳಲ್ಲಿರುವ ನಟಿ ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ವಾಮಿಕಾ ಗಬ್ಬಿ ಅವರನ್ನು ಹಿಂದಿಕ್ಕಿ ಶಾರುಕ್ ಟಾಪ್ ಒನ್ ಆಗಿದ್ದಾರೆ.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡುಂಕಿ' ಸಿನಿಮಾದೊಂದಿಗೆ 2023ನೇ ವರ್ಷದ ತಮ್ಮ ಮೂರನೇ ಮತ್ತು ಅಂತಿಮ ಚಿತ್ರ ಬಿಡುಗಡೆಗಾಗಿ ಶಾರುಖ್ ಕಾಯುತ್ತಿದ್ದಾರೆ. ಡಿಸೆಂಬರ್ 21 ರಂದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಸತತ ಎರಡನೇ ವರ್ಷ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿರುವ ಆಲಿಯಾ ಭಟ್ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಮೂಲಕ ಯಶಸ್ಸನ್ನು ಗಳಿಸಿದರು ಮತ್ತು ನೆಟ್‌ಫ್ಲಿಕ್ಸ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್'ನಲ್ಲಿ ಗಾಲ್ ಗಡೋಟ್ ಜೊತೆ ನಟಿಸಿದ್ದು, ಹಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
ದೀಪಿಕಾ ಪಡುಕೋಣೆ 'ಪಠಾಣ್'ನಲ್ಲಿ ಶಾರುಖ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ ಮತ್ತು 'ಜವಾನ್'ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
'ಜವಾನ್' ಸಿನಿಮಾದ ನಾಯಕಿ ನಯನತಾರಾ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ ಮತ್ತು ವಿಜಯ್ ಸೇತುಪತಿ ಕೂಡ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಅವರೊಂದಿಗೆ ಜವಾನ್ ಚಿತ್ರದ ಮೂಲಕವೇ ವಿಜಯ್ ಸೇತುಪತಿ ಕೂಡ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ, ಸೇತುಪತಿ (ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ) ಮುಖ್ಯ ಪ್ರತಿಸ್ಪರ್ಧಿಯಾಗಿದ್ದರು. ಇದರೊಂದಿಗೆ ಅವರು ಪ್ರೈಮ್ ವಿಡಿಯೋ ಸರಣಿ 'ಫರ್ಜಿ'ನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಯನತಾರಾ ನಂತರ ತಮನ್ನಾ ಭಾಟಿಯಾ, ಕರೀನಾ ಕಪೂರ್ ಖಾನ್ ಮತ್ತು ಸೋಭಿತಾ ಧೂಳಿಪಾಲ ಕ್ರಮವಾಗಿ ಆರು, ಏಳು ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ.
'OMG 2', 'ಮಿಷನ್ ರಾಣಿಗಂಜ್' ಮತ್ತು 'ಸೆಲ್ಫಿ'ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅಕ್ಷಯ್ ಕುಮಾರ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾರೆ.
ಶಾರುಖ್ ನಂತರ ಎರಡನೇ ಸ್ಥಾನ ಪಡೆದ ನಟಿ ಆಲಿಯಾ ಭಟ್, ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
'ಅವರು (ಅಭಿಮಾನಿಗಳು) ನಿಜವಾದ ರಾಜರು ಮತ್ತು ರಾಣಿಯರು ಎಂದು ನಾನು ಯಾವಾಗಲೂ ನಂಬಿದ್ದೇನೆ ಮತ್ತು ಅವರನ್ನು ಮೀರಿದ್ದು ಯಾವುದೂ ಇಲ್ಲ. ಪಟ್ಟಿಯಲ್ಲಿ ನಾನಿರುವ ಸ್ಥಾನಕ್ಕೆ ನನ್ನನ್ನು ತಂದಿದ್ದಕ್ಕಾಗಿ ನನ್ನ ಪ್ರೇಕ್ಷಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಅವರನ್ನು ಮನರಂಜಿಸುವುದನ್ನು ಮುಂದುವರಿಸುತ್ತೇನೆ. ಪ್ರೀತಿ ಮತ್ತು ಕೃತಜ್ಞತೆಯಿಂದ ನಾನು ತುಂಬಿಹೋಗಿದ್ದೇನೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಇನ್ನಷ್ಟು ಸ್ಪೂರ್ತಿದಾಯಕ ಕಥೆಗಳು ಮತ್ತು ಪಾತ್ರಗಳನ್ನು ತೆರೆಯ ಮೇಲೆ ತರುತ್ತೇನೆ ಎಂದು ಭರವಸೆ ನೀಡುತ್ತೇನೆ' ಎಂದು ನಟಿ ಹೇಳಿದರು.
ವೆಬ್ ಸರಣಿ 'ಜುಬಿಲಿ', 'ಚಾರ್ಲಿ ಚೋಪ್ರಾ & ದಿ ಮಿಸ್ಟರಿ ಆಫ್ ಸೋಲಾಂಗ್ ವ್ಯಾಲಿ' ಮತ್ತು 'ಖುಫಿಯಾ' ಚಿತ್ರದಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾದ ಗಬ್ಬಿ, IMDbಯ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ ಥ್ರಿಲ್ ಆಗಿದ್ದೇನೆ ಎಂದು ಹೇಳಿದರು.
'IMDb ಜಾಗತಿಕ ಪ್ರೇಕ್ಷಕರ ಭಾವನೆಯನ್ನು ಪ್ರತಿನಿಧಿಸುತ್ತದೆ ಎಂಬ ಅಂಶವು ನನಗೆ ಇದು ಇನ್ನಷ್ಟು ವಿಶೇಷವಾಗಿದೆ. ವಿಶಾಲ್ ಭಾರದ್ವಾಜ್ ಅವರ ಸ್ಪೈ ಥ್ರಿಲ್ಲರ್ 'ಖುಫಿಯಾ' ಮತ್ತು ವಿಕ್ರಮಾದಿತ್ಯ ಮೋಟ್ವಾನೆ ಅವರ 'ಜುಬಿಲಿ', ಹೃದಯಸ್ಪರ್ಶಿ ವೆಬ್ ಸರಣಿ 'ಮಾಡರ್ನ್ ಲವ್ ಚೆನ್ನೈ' ಮತ್ತು ಪಂಜಾಬಿ ಚಿತ್ರ 'ಕಲಿ ಜೋಟ್ಟಾ' ಮೂಲಕ ನಾನು ಹಲವು ಪ್ರಕಾರಗಳು ಮತ್ತು ಭಾಷೆಗಳಲ್ಲಿ ಕೆಲಸ ಮಾಡುವುದರಲ್ಲಿ ಈ ವರ್ಷದಲ್ಲಿ ನಿರತಳಾಗಿದ್ದೆ ಮತ್ತು ಅಭಿಮಾನಿಗಳು ಅದನ್ನು ಮೆಚ್ಚಿರುವುದು ನನಗೆ ಸಂತೋಷ ಮತ್ತು ಕೃತಜ್ಞತೆಯನ್ನು ನೀಡುತ್ತದೆ' ಎಂದಿದ್ದಾರೆ.
Advertisement