
ರಣ್ಬೀರ್ ಕಪೂರ್ ನಟನೆಯ ಬಹುನಿರೀಕ್ಷಿತ ಅನಿಮಲ್ ಚಿತ್ರದ ಟೀಸರ್ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗುತ್ತಿದ್ದು, ಇದಕ್ಕೂ ಮುನ್ನ ಚಿತ್ರ ತಂಡ ಸಿನಿಮಾದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದೆ.
ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಚಿತ್ರದಲ್ಲಿನ ರಶ್ಮಿಕಾ ಅವರ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ.
ಕಳೆದ ನಾಲ್ಕು ದಿನಗಳಿಂದ ಅನಿಮಲ್ ಚಿತ್ರತಂಡ ಒಂದೊಂದೇ ಪಾತ್ರಗಳ ಫಸ್ಟ್ ಲುಕ್‌ನ್ನು ರಿಲೀಸ್ ಮಾಡುತ್ತಲೇ ಬರುತ್ತಿದೆ. ಆರಂಭದಲ್ಲಿ ರಣಬೀರ್ ಕಪೂರ್, ಅದಾದ ಬಳಿಕ ಅನಿಲ್ ಕಪೂರ್, ಇದೀಗ ನಾಯಕಿ ರಶ್ಮಿಕಾ ಮಂದಣ್ಣ ಅವರ ಲುಕ್'ನ್ನು ಬಹಿರಂಗಪಡಿಸಿದೆ.
ರಶ್ಮಿಕಾ ಅವರು ಚಿತ್ರದಲ್ಲಿ ಗೀತಾಂಜಲಿ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಬಿಳಿ ಮತ್ತು ಕೆಂಪು ಸೀರೆಯಲ್ಲಿ. ಹಣೆಯಲ್ಲಿ ಮಾಸಿದ ಕುಂಕುಮ, ಕೊರಳಲ್ಲಿ ಒಂದೆಳೆ ತಾಳಿ ಧರಿಸಿದ ಭಂಗಿಯಲ್ಲಿ, ಕಿರುನಗೆಯೊಂದಿಗೆ ಗೀತಾಂಜಲಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಅರ್ಜುನ್ ರೆಡ್ಡಿ ಎನ್ನುವ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಿರ್ದೇಶನದಲ್ಲಿ ಅನಿಮಲ್ ಸಿನಿಮಾ ಮೂಡಿಬಂದಿದೆ. ಇದೀಗ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಚಿತ್ರದ ಟೀಸರ್ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ರಿವೀಲ್ ಮಾಡಿದೆ. ಸೆಪ್ಟೆಂಬರ್ 28 ರಂದು ಬೆಳಗ್ಗೆ 10 ಗಂಟೆಗೆ ಅನಿಮಲ್ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ಡಿಸೆಂಬರ್ 1 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿರುವ ಅನಿಮಲ್ ಸಿನಿಮಾ, ಹಿಂದಿ ಭಾಷೆಯ ಜತೆಗೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆಗೆ ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು 'ಕಾಲಾ' ಸಿನಿಮಾ ಖ್ಯಾತಿಯ ನಟಿ ತೃಪ್ತಿ ದಿಮ್ರಿ ನಟಿಸಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು ಒಂದೆಡೆಯಾದರೆ, ಇದರೊಂದಿಗೆ ರಶ್ಮಿಕಾಗೆ ಇದು ಮೂರನೇ ಹಿಂದಿ ಚಿತ್ರವಾಗಿದೆ.
ಚಿತ್ರಕ್ಕೆ ಹರ್ಷವರ್ಧನ್ ರಾಮೇಶ್ವರ್ ಸಂಗೀತ ಸಂಯೋಜಿಸಿದ್ದರೆ, ಅಮಿತ್ ರಾಯ್ ಛಾಯಾಗ್ರಹಣ ನೀಡಿದ್ದಾರೆ. ಸಂಭಾಷಣೆಯನ್ನು ಸೌರಭ್ ಗುಪ್ತಾ ಬರೆದಿದ್ದಾರೆ.
Advertisement