ಬಾಲಿವುಡ್ ನಟ ಸುನೀಲ್ ಶೆಟ್ಟಿ ಶೂಟಿಂಗ್ ಸೆಟ್ ನಲ್ಲಿ ಗಾಯಗೊಂಡಿದ್ದಾರೆ. ಅವರ ಮುಂದಿನ ‘ಹಂಟರ್’ ವೆಬ್ ಸರಣಿಯ ಚಿತ್ರೀಕರಣ ವೇಳೆಯಲ್ಲಿ ಈ ಘಟನೆ ನಡೆದಿದೆ. ಮುಂಬೈನಲ್ಲಿ ವೆಬ್ ಸರಣಿಯ ಚಿತ್ರೀಕರಣ ನಡೆಯುತ್ತಿದ್ದು,
ಆ್ಯಕ್ಷನ್ ದೃಶ್ಯ ಚಿತ್ರೀಕರಿಸುವಾಗ ಹಲವು ಎಚ್ಚರಿಕೆಯ ಕ್ರಮ ತೆಗೆದುಕೊಂಡಿದ್ದರೂ ಕೂಡ ಸುನೀಲ್ ಶೆಟ್ಟಿಗೆ ಪೆಕ್ಕಲುಬಿಗೆ ಗಾಯವಾಗಿದೆ. ಕೂಡಲೇ ವೈದ್ಯರನ್ನು ಸ್ಥಳಕ್ಕೆ ಕರೆಸಿ ನಟನಿಗೆ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿತ್ತು.
ಈ ವದಂತಿಗಳನ್ನು ತಳ್ಳಿ ಹಾಕಿರುವ 63 ವರ್ಷದ ನಟ, ಗಂಭೀರ ರೀತಿಯ ಪೆಟ್ಟಾಗಿಲ್ಲ. ಸಣ್ಣ ಪ್ರಮಾಣದಲ್ಲಿ ಗಾಯವಾಗಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುನೀಲ್ ಶೆಟ್ಟಿ, ಸಣ್ಣ ಗಾಯ, ಸೀರಿಯಸ್ ಏನು ಇಲ್ಲ. ನಾನು ಈಗ ಚೇತರಿಸಿಕೊಂಡಿದ್ದೇನೆ. ಮುಂದಿನ ಚಿತ್ರೀಕರಣಕ್ಕೆ ತಯಾರಿಯಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ನಟನ ಕಡೆಯಿಂದ ಅಧಿಕೃತ ಅಪ್‌ಡೇಟ್ ತಿಳಿದು ಫ್ಯಾನ್ಸ್ ನಿರಾಳವಾಗಿದ್ದಾರೆ.
ಹಲವು ಸ್ಟಾರ್ ಕಲಾವಿದರು ಇತ್ತೀಚಿಗೆ ವೆಬ್ ಸರಣಿಯಲ್ಲೂ ಮಿಂಚುತ್ತಿದ್ದಾರೆ.ಆ ಸಾಲಿಗೆ ಸುನೀಲ್ ಶೆಟ್ಟಿ ಕೂಡ ಸೇರ್ಪಡೆ ಆಗುತ್ತಿದ್ದಾರೆ. ಈ ಹಿಂದೆ ‘ಧಾರಾವಿ ಬ್ಯಾಂಕ್’ ವೆಬ್ ಸಿರೀಸ್ನಲ್ಲಿ ನಟಿಸಿದ್ದ ಸುನೀಲ್ ಶೆಟ್ಟಿ, ‘ಹಂಟರ್’ ವೆಬ್ ಸರಣಿಯಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದಾರೆ.
Advertisement