
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಚಿತ್ರ ಬಿಡುಗಡೆಯಾದ ಐದನೇ ದಿನಕ್ಕೆ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ತೀವ್ರ ಕುಸಿತ ಕಂಡಿದೆ. ಸಿಕಂದರ್ ಚಿತ್ರ ಕಳಪೆ ಪ್ರದರ್ಶನ ನೀಡುತ್ತಿದ್ದು, ಗುರುವಾರ (ಏಪ್ರಿಲ್ 3) ಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಕೇವಲ 5.75 ಕೋಟಿ ರೂ. ಗಳಿಸಿದೆ.
ಸಿಕಂದರ್ ಈವರೆಗೆ ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು 90 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು Sacnilk ತಿಳಿಸಿದೆ. ಚಿತ್ರ ಬಿಡುಗಡೆಯಾದ ಮೊದಲನೇ ದಿನ 26 ಕೋಟಿ ರೂ. ಗಳಿಕೆ ಕಂಡಿತ್ತು. ಈದ್ ದಿನದಂದು, ಚಿತ್ರದ ಗಳಿಕೆಯಲ್ಲಿ ಸ್ವಲ್ಪ ಏರಿಕೆ ಕಂಡು 29 ಕೋಟಿ ರೂ. ಸಂಗ್ರಹಿಸಿತ್ತು.
ಈದ್ ರಜೆಯ ನಂತರ, ಚಿತ್ರದ ಗಳಿಕೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡುಬಂದಿದೆ. ಬುಧವಾರ ಚಿತ್ರದ ಗಳಿಕೆಯಲ್ಲಿ ಶೇ 50ರಷ್ಟು ಕುಸಿತ ಕಂಡು, 9.75 ಕೋಟಿ ರೂ. ಗಳಿಸಿದೆ. ಸಲ್ಮಾನ್ ಖಾನ್ ಅವರ ಸ್ಟಾರ್ ಪವರ್ ಮತ್ತು ಅಮೀರ್ ಖಾನ್ ಜೊತೆಗಿನ ಪ್ರಚಾರ ಚಿತ್ರಕ್ಕೆ ಸಕಾರಾತ್ಮಕವಾಗಿ ಯಾವುದೇ ಪರಿಣಾಮ ಬೀರಿಲ್ಲ.
'ಮುಂಬೈನಲ್ಲಿ ಯಾವುದೇ ಶೋ ರದ್ದಾಗಿರುವುದು ನಮಗೆ ತಿಳಿದುಬಂದಿಲ್ಲ. ಕಳಪೆ ಪ್ರದರ್ಶನದಿಂದಾಗಿ, ಸೂರತ್, ಅಹಮದಾಬಾದ್, ಭೋಪಾಲ್ ಮತ್ತು ಇಂದೋರ್ ಸೇರಿದಂತೆ ಹಲವು ನಗರಗಳಲ್ಲಿ ಚಿತ್ರ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ವ್ಯಾಪಾರ ವಿಶ್ಲೇಷಕರೊಬ್ಬರು ಬಾಲಿವುಡ್ ಹಂಗಾಮಾಗೆ ತಿಳಿಸಿದ್ದಾರೆ.
ಆದಾಗ್ಯೂ, ಸಿಕಂದರ್ ಚಿತ್ರವು 991 ಆಸನಗಳ ಗೈಟಿ ಮತ್ತು 818 ಆಸನಗಳ ಗ್ಯಾಲಕ್ಸಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬೇಡಿಕೆಯನ್ನು ಪೂರೈಸಲು ಮಾರ್ಚ್ 31 ರಿಂದ ಹೆಚ್ಚುವರಿ ಪ್ರದರ್ಶನಗಳನ್ನು ಸೇರಿಸಲಾಗಿದೆ. ಗೈಟಿ ಗ್ಯಾಲಕ್ಸಿ ದೀರ್ಘಕಾಲದಿಂದ ಮುಚ್ಚಲಾಗಿದ್ದ ತನ್ನ ಮೂರನೇ ಪರದೆ 'ಗಾಸಿಪ್' ಅನ್ನು ಸಹ ಮತ್ತೆ ತೆರೆದಿದೆ.
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಸಿಕಂದರ್ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಸಿಕಂದರ್ ಚಿತ್ರವನ್ನು ಎಆರ್ ಮುರುಗದಾಸ್ ನಿರ್ದೇಶಿಸಿದ್ದು, 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಸಾಜಿದ್ ನಾಡಿಯಾಡ್‌ವಾಲಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್, ಸತ್ಯರಾಜ್, ಶರ್ಮಾನ್ ಜೋಶಿ, ಪ್ರತೀಕ್ ಬಬ್ಬರ್, ಅಂಜಿನಿ ಧವನ್ ಮತ್ತು ಜತಿನ್ ಸರ್ನಾ ಕೂಡ ನಟಿಸಿದ್ದಾರೆ.
Advertisement