
ನವದೆಹಲಿ: ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಫೆಬ್ರವರಿ 14, ಪ್ರೇಮಿಗಳ ದಿನದಂದು ಮನಾಲಿಯಲ್ಲಿರುವ ತಮ್ಮ ಕೆಫೆ 'ದಿ ಮೌಂಟೇನ್ ಸ್ಟೋರಿ' ಆರಂಭವಾಗಲಿದೆ ಎಂದು ಬುಧವಾರ ತಿಳಿಸಿದ್ದಾರೆ.
ಕೆಫೆ ಮತ್ತು ಅದರ ಒಳಾಂಗಣದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಕಂಗನಾ, ಒಂದು ಕೆಫೆ ಆರಂಭಿಸುವುದು ತಮ್ಮ ಬಹು ದಿನಗಳ ಕನಸಾಗಿತ್ತು ಮತ್ತು ಅದು ಅಂತಿಮವಾಗಿ ನನಸಾಗಿದೆ ಎಂದು ಹೇಳಿದ್ದಾರೆ.
ಕಂಗನಾ ಹಂಚಿಕೊಂಡ ಪೋಸ್ಟ್ ಗೆ ಅಭಿಮಾನಿಗಳಿಂದ ಲೈಕ್ ಮತ್ತು ಕಮೆಂಟ್ ಗಳ ಸುರಿಮಳೆ ಆಗಿದ್ದು, ನಟಿ ಶೀಘ್ರದಲ್ಲೇ ಕೆಫೆ ಆರಂಭಿಸುವ ಬಯಕೆ ವ್ಯಕ್ತಪಡಿಸಿದ್ದ ಹಳೆಯ ಸಂದರ್ಶನವನ್ನು ಹಂಚಿಕೊಂಡು ಶುಭ ಹಾರೈಸಿದ್ದಾರೆ.
2013 ರಲ್ಲಿ ನಟಿ ದೀಪಿಕಾ ಪಡುಕೋಣೆ ಕೂಡ ಹಾಜರಿದ್ದ ಸಂದರ್ಶನವೊಂದರಲ್ಲಿ, "ನಾನು ಪ್ರಪಂಚದಾದ್ಯಂತ ಊಟ ಮಾಡಿದ್ದೇನೆ ಮತ್ತು ನಾನು ಅದ್ಭುತವಾದ ಪಾಕವಿಧಾನಗಳನ್ನು ಹೊಂದಿದ್ದೇನೆ. ನಾನು ಒಂದು ತುಂಬಾ ಸುಂದರವಾದ, ಚಿಕ್ಕ ಕೆಫೆಟೇರಿಯಾವನ್ನು ಹೊಂದಲು ಬಯಸುತ್ತೇನೆ. ನನಗೆ ಆಹಾರದ ಬಗ್ಗೆ ತುಂಬಾ ಚೆನ್ನಾಗಿ ತಿಳಿದಿದೆ" ಎಂದು ಹೇಳಿದ್ದಾರೆ.
ಇನ್ನು "ನಾನು ನಿಮ್ಮ ಮೊದಲ ಗ್ರಾಹಕಿ ಆಗುತ್ತೇನೆ" ಎಂದು ಪಡುಕೋಣೆ ತಕ್ಷಣ ಉತ್ತರಿಸಿದ್ದರು.
ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವಿಡಿಯೋವನ್ನು ಮರು ಹಂಚಿಕೊಂಡ ಕಂಗನಾ, ಪಡುಕೋಣೆ ಅವರನ್ನು ಟ್ಯಾಗ್ ಮಾಡಿ, "ನೀವೇ ಮೊದಲ ಗ್ರಾಹಕಿಯಾಗಬೇಕು" ಎಂದು ಪ್ರೀತಿಯಿಂದ ಆಹ್ವಾನಿಸಿದ್ದಾರೆ.
Advertisement