
ನವದೆಹಲಿ: ನಟಿ ಕಂಗನಾ ರಣಾವತ್ ನಿರ್ದೇಶಿಸಿ ನಟಿಸಿರುವ 'ಎಮರ್ಜೆನ್ಸಿ' ಚಿತ್ರವು ಬಿಡುಗಡೆಯಾದ ಎರಡು ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 7.39 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದೆ.
ರಣಾವತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 1975 ರಿಂದ 1977 ರವರೆಗೆ ದೇಶದಲ್ಲಿ ಹೇರಲಾಗಿದ್ದ 21 ತಿಂಗಳ ತುರ್ತು ಪರಿಸ್ಥಿತಿಯ ಕುರಿತಾದ ಕಥೆಯನ್ನು ಒಳಗೊಂಡಿದೆ.
ಸೆನ್ಸಾರ್ ಪ್ರಮಾಣಪತ್ರ ಮತ್ತು ಸಿಖ್ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪದ ನಡುವೆ ವಿವಾದ ಉಂಟುಮಾಡಿದ್ದ ಎಮರ್ಜೆನ್ಸಿ ಚಿತ್ರದ ಬಿಡುಗಡೆಯನ್ನು ಹಲವಾರು ಬಾರಿ ಮುಂದೂಡಲಾಗಿತ್ತು. ಬಳಿಕ ಶುಕ್ರವಾರ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಕಂಗನಾ ರಣಾವತ್ ಅವರ ಮಣಿಕರ್ಣಿಕಾ ಫಿಲ್ಮ್ಸ್ ಪ್ರಕಾರ, ಚಿತ್ರವು ಮೊದಲ ದಿನದಲ್ಲಿ 3.11 ಕೋಟಿ ರೂ. ಗಳಿಸಿದೆ. ಎರಡನೇ ದಿನ ಶನಿವಾರ 4.28 ಕೋಟಿ ರೂ. ಗಳಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಒಟ್ಟಾರೆ 7.39 ಕೋಟಿ ರೂ.ಗಳನ್ನು ಕಲೆಕ್ಷನ್ ಮಾಡಿದೆ.
'ಎಮರ್ಜೆನ್ಸಿ ಚಿತ್ರವು ದೇಶವ್ಯಾಪಿ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆತರುತ್ತಿದೆ! ಸದ್ಯದ ಚಿತ್ರದ ವೇಗವು ಅದರ ಬಗ್ಗೆಯೇ ಮಾತನಾಡುವಂತೆ ಮಾಡುತ್ತಿದೆ' ಎಂದು ಬ್ಯಾನರ್ ಭಾನುವಾರ ಪೋಸ್ಟ್ ಮಾಡಿದೆ.
ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಮತ್ತು ಸಿಖ್ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿದ ನಂತರ ಪಂಜಾಬ್‌ನ ಚಿತ್ರಮಂದಿರಗಳಲ್ಲಿ ಶುಕ್ರವಾರ "ಎಮರ್ಜೆನ್ಸಿ" ಚಿತ್ರ ಪ್ರದರ್ಶನವನ್ನು ತಡೆಹಿಡಿಯಲಾಯಿತು. ಅನೇಕ ರಾಜಕಾರಣಿಗಳು ಚಿತ್ರ ನಿಷೇಧಕ್ಕೆ ಕರೆ ನೀಡಿದರು.
ಗುರುದ್ವಾರ ಸಂಸ್ಥೆಯ ಎಸ್‌ಜಿಪಿಸಿ ಮತ್ತು ಹಲವಾರು ಸಿಖ್ ಸಂಘಟನೆಗಳು ರಾಜ್ಯದಾದ್ಯಂತ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಮತ್ತು ಮಾಲ್‌ಗಳ ಹೊರಗೆ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದವು.
'ಎಮರ್ಜೆನ್ಸಿ' ಚಿತ್ರದಲ್ಲಿ ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್, ಮಿಲಿಂದ್ ಸೋಮನ್ ಮತ್ತು ದಿವಂಗತ ನಟ ಸತೀಶ್ ಕೌಶಿಕ್ ನಟಿಸಿದ್ದಾರೆ. ಈ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲಂಸ್ ನಿರ್ಮಿಸಿದೆ.
Advertisement