
ಕೋಲ್ಕತ್ತಾ: ಜನವರಿ 21ರಂದು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ನಡೆದ ದಿನ್ಹತಾ ಉತ್ಸವದಲ್ಲಿ ಲೈವ್ ಫರ್ಫಾಮೆನ್ಸ್ ನೀಡುತ್ತಿದ್ದ ವೇಳೆ ಜನಪ್ರಿಯ ಬಾಲಿವುಡ್ ಗಾಯಕಿ ಮೊನಾಲಿ ಠಾಕೂರ್ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಇದೀಗ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಹತ್ತಿರದ ಮೂಲಗಳು ಗುರುವಾರ ತಿಳಿಸಿವೆ.
ವೇದಿಕೆ ಮೇಲಿದ್ದ ಮೊನಾಲಿ ಅವರು ಅರ್ಧಕ್ಕೆ ಹಾಡು ನಿಲ್ಲಿಸಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ಅಸ್ವಸ್ಥರಾಗಿದ್ದಾರೆ.
ಕಾರ್ಯಕ್ರಮವನ್ನು ಸ್ಥಗಿತಗೊಳಿಸುವ ಮುನ್ನ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿದ ಅವರು, 'ನನಗೆ ಈಗ ಹುಷಾರಿಲ್ಲ. ಆದರೆ, ನಾನು ಆಯೋಜಕರಿಗೆ ಭರವಸೆ ನೀಡಿದಂತೆ, ನಾನು ಬಂದು ನನ್ನಿಂದ ಸಾಧ್ಯವಾದಷ್ಟು ಕಾಲ ಪ್ರದರ್ಶನ ನೀಡಿದ್ದೇನೆ. ನೀವು ತುಂಬಾ ಬೆಂಬಲ ನೀಡಿದ್ದೀರಿ. ಕ್ಷಮಿಸಿ' ಎಂದು ಅಲ್ಲಿಂದ ತೆರಳಿದರು. ಮೊನಾಲಿ ಅವರನ್ನು ಆರಂಭದಲ್ಲಿ ದಿನ್ಹತಾ ಉಪ-ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಕೂಚ್ ಬೆಹಾರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಮೊನಾಲಿ ಅವರು ಜನವರಿ 22ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಮತ್ತು ನಂತರ ಮುಂಬೈಗೆ ತೆರಳಿದ್ದಾರೆ. ತಾನು ಚೇತರಿಸಿಕೊಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2022ರ ಮೇ 31 ರಂದು ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದ ವೇಳೆ ಗಾಯಕ ಕೆಕೆ ಅವರ ದುರಂತ ಸಾವಿನ ನಂತರ ಈ ಘಟನೆ ನಡೆದಿದೆ.
Advertisement