
ಮುಂಬೈ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರ ಎಕ್ಸ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ತಮ್ಮ ಖಾತೆಯನ್ನು ಅಮಾನತುಗೊಳಿಸಿರುವ ವಿಚಾರವನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, ಈ ನಿರ್ಧಾರವನ್ನು 'ಹಾಸ್ಯಾಸ್ಪದ ಮತ್ತು ಅಸಮರ್ಥನೀಯ' ಎಂದು ಟೀಕಿಸಿದ್ದಾರೆ.
ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದ ಎರಡು ನಿರ್ದಿಷ್ಟ ಚಿತ್ರಗಳಿಗೆ ಸಂಬಂಧಿಸಿದ ಹಕ್ಕುಸ್ವಾಮ್ಯ ಉಲ್ಲಂಘನೆಗಳ ಕಾರಣದಿಂದಾಗಿ ತನ್ನ X ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ನಟಿ ತನ್ನ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಒಂದು ಚಿತ್ರವು ಹಿಂದಿಯಲ್ಲಿ ಪ್ರಸಿದ್ಧವಾದ ಪ್ರತಿಭಟನಾ ಘೋಷಣೆಯನ್ನು ಒಳಗೊಂಡಿತ್ತು: 'ಗಾಂಧಿ, ನಮಗೆ ನಾಚಿಕೆಯಾಗುತ್ತಿದೆ; ನಿಮ್ಮ ಕೊಲೆಗಾರರು ಇನ್ನೂ ಜೀವಂತವಾಗಿದ್ದಾರೆ' ಎನ್ನುವುದಾಗಿತ್ತು. ಮತ್ತೊಂದು ಗಣರಾಜ್ಯೋತ್ಸವದಂದು ತನ್ನ ಸ್ವಂತ ಮಗು ಭಾರತದ ಧ್ವಜವನ್ನು ಬೀಸುತ್ತಿರುವ ಫೋಟೊವನ್ನು ಹಂಚಿಕೊಳ್ಳಲಾಗಿತ್ತು. ಈ ಫೋಟೊದಲ್ಲಿ ಮಗುವಿನ ಮುಖವನ್ನು ಮರೆಮಾಡಲಾಗಿತ್ತು.
ಹೀಗಿದ್ದರೂ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಇವುಗಳು ಹೇಗೆ ಹಕ್ಕುಸ್ವಾಮ್ಯ ಉಲ್ಲಂಘನೆಯಾಗುತ್ತವೆ ಎಂದು ಪ್ರಶ್ನಿಸಿರುವ ಸ್ವರಾ ಭಾಸ್ಕರ್, ಸಾಮೂಹಿಕವಾಗಿ ಪೋಸ್ಟ್ ಅನ್ನು ರಿಪೋರ್ಟ್ ಮಾಡಿರುವುದರಿಂದ ತನ್ನ ಖಾತೆಯನ್ನು ಅಮಾನತು ಮಾಡಿರಬಹುದು ಎಂದಿದ್ದಾರೆ.
ತನ್ನ ಎಕ್ಸ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸುವ ಮೂಲಕ ತನ್ನನ್ನು ಮೌನಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದಿರುವ ಅವರು, X ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದಿದ್ದಾರೆ.
ಒಂದು ವೇಳೆ ಈ ಟ್ವೀಟ್ ಅನ್ನು ಸಾಮೂಹಿಕವಾಗಿ ರಿಪೋರ್ಟ್ ಮಾಡಿದ್ದರೆ, ಅದು ನನಗೆ ಕಿರುಕುಳ ನೀಡುವ ಮತ್ತು ನನ್ನ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿರುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ತನ್ನ ನಿಷ್ಠುರ ರಾಜಕೀಯ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿರುವ ನಟಿ ಸ್ವರಾ ಭಾಸ್ಕರ್ ಆಗಾಗ್ಗೆ ಆನ್‌ಲೈನ್ ಹಿನ್ನಡೆಯನ್ನು ಎದುರಿಸುತ್ತಿರುತ್ತಾರೆ.
Advertisement