ರಾಮನಾಗಿ ರಣಬೀರ್ ಕಪೂರ್: ದೇವರ ಹೆಸರಿರುವರು ಅತ್ಯಾಚಾರಿಗಳಾಗಬಹುದು, ಗೋಮಾಂಸ ತಿನ್ನುವವರು ನಟಿಸಬಾರದೇ?
ನವದೆಹಲಿ: ರಾಮಾಯಣ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ನಟಿಸಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಗಾಯಕಿ ಚಿನ್ಮಯಿ ಶ್ರೀಪಾದ ಅವರಿಗೆ ತಿರುಗೇಟು ನೀಡಿದ್ದು, ನಟನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಗೋಮಾಂಸ ತಿನ್ನುವ ಬಗ್ಗೆ ನಟ ರಣಬೀರ್ ಕಪೂರ್ ನೀಡಿದ್ದ ಹೇಳಿಕೆ ಸುಮಾರು 15 ವರ್ಷಗಳ ನಂತರ ಇದೀಗ ಮುನ್ನೆಲೆಗೆ ಬಂದಿದ್ದು, ಮುಂಬರುವ ಚಿತ್ರ ರಾಮಾಯಣದಲ್ಲಿ ಅವರನ್ನು ರಾಮನ ಪಾತ್ರದಲ್ಲಿ ನಟಿಸಿರುವ ಚಿತ್ರತಂಡದ ನಿರ್ಧಾರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸಿದ್ದಾರೆ.
ಗಾಯಕಿ ಚಿನ್ಮಯಿ, 'ಗೋಮಾಂಸ ಭಕ್ಷಕ ಈಗ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ! ಬಾಲಿವುಡ್‌ಗೆ ಏನಾಗಿದೆ?' ಎಂಬ ಟ್ವೀಟ್ ಅನ್ನು ರೀ-ಶೇರ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, 'ದೇವರ ಹೆಸರನ್ನು ಬಳಸುವ ಬಾಬಾಜಿ ಅತ್ಯಾಚಾರಿಯಾಗಬಹುದು ಮತ್ತು ಭಕ್ತ ಭಾರತದಲ್ಲಿ ಮತಗಳನ್ನು ಪಡೆಯಲು ಅವನಿಗೆ ಪೆರೋಲ್ ಸಿಗುತ್ತಲೇ ಇರಬಹುದು. ಆದರೆ, ಯಾರಾದರೂ ಏನು ತಿನ್ನುತ್ತಾರೆ ಎಂಬುದೇ ದೊಡ್ಡ ಸಮಸ್ಯೆಯಾಗುತ್ತದೆ' ಎಂದು ಬರೆದಿದ್ದಾರೆ.
ಇದಕ್ಕೆ ಬಳಕೆದಾರರೊರು, 'ಒಂದು ಕೆಟ್ಟ ವಿಷಯ ಇನ್ನೊಂದು ಕೆಟ್ಟ ವಿಷಯವನ್ನು ಹೇಗೆ ಸಮರ್ಥಿಸುತ್ತದೆ?' ಎಂದಿದ್ದಾರೆ.
ಅವರಿಗೂ ಪ್ರತಿಕ್ರಿಯೆ ನೀಡಿರುವ ಚಿನ್ಮಯಿ, 'ಚೆನ್ನಾಗಿದೆ. ಅತ್ಯಾಚಾರಿ ನಿಮ್ಮ ನಡುವೆ ಮತಗಳಿಗಾಗಿ ಪ್ರಚಾರ ಮಾಡಬಹುದು. ಆದರೆ, ಪಾತ್ರವನ್ನು ನಿರ್ವಹಿಸುವ ನಟ ಕೂಡ 'ಕೆಟ್ಟವನಾಗುತ್ತಾನೆಯೇ'. ರಾಮ್ ರಹೀಮ್ ಅವರಂತಹ ವ್ಯಕ್ತಿಗಳನ್ನು ಸಂಸದರನ್ನಾಗಿ ಮಾಡಲು ಮತ್ತು ನಿಮ್ಮ ಮನೆಗೆ ವೈಯಕ್ತಿಕವಾಗಿ ಭೇಟಿ ನೀಡಿ ಮತ ಕೇಳಲು ಅವಕಾಶ ನೀಡುವಿರಿ' ಎಂದು ಹೇಳಿದ್ದಾರೆ.
2011ರಲ್ಲಿ ರಣಬೀರ್ ಕಪೂರ್ ತಮ್ಮ 'ರಾಕ್‌ಸ್ಟಾರ್' ಚಿತ್ರದ ಪ್ರಚಾರದಲ್ಲಿದ್ದ ವೇಳೆ, 'ನನ್ನ ಕುಟುಂಬ ಪೇಶಾವರದವರು. ಆದ್ದರಿಂದ ಪೇಶಾವರಿ ಆಹಾರವು ಬಹಳಷ್ಟು ನಮ್ಮ ಅಭ್ಯಾಸವಾಗಿದೆ. ನಾನು ಮಟನ್, ಪಾಯ ಮತ್ತು ಗೋಮಾಂಸದ ಅಭಿಮಾನಿ. ಹೌದು, ನಾನು ದೊಡ್ಡ ಗೋಮಾಂಸದ ಅಭಿಮಾನಿ' ಎಂದು ಹೇಳಿದ್ದರು.
ನಿರ್ದೇಶಕ ನಿತೇಶ್ ತಿವಾರಿ ಅವರ ಮುಂಬರುವ ಚಿತ್ರ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ. ಇದನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಭಾಗ 1 2026ರ ದೀಪಾವಳಿಯಲ್ಲಿ ಮತ್ತು ಭಾಗ 2 2027ರ ದೀಪಾವಳಿಯಲ್ಲಿ ತೆರೆಗೆ ಬರಲಿದೆ.
ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಹ್ಯಾನ್ಸ್ ಜಿಮ್ಮರ್ ಮತ್ತು ಎಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ನಿರ್ಮಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ