
ಮುಂಬೈ: ಬಾಲಿವುಡ್ ಹಿರಿಯ ನಟ, ನಿರ್ದೇಶಕ ಮತ್ತು ದೂರದರ್ಶನ ನಿರ್ಮಾಪಕ ಧೀರಜ್ ಕುಮಾರ್ ಅವರು ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದು, ಅವರಿಗೆ 79 ವರ್ಷ ವಯಸ್ಸಾಗಿತ್ತು.
ನ್ಯುಮೋನಿಯಾದಿಂದ ಬಳಲುತ್ತಿದ್ದ ಧೀರಜ್ ಕುಮಾರ್ ಅವರು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 11 ಗಂಟೆಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಸ್ನೇಹಿತ ಅಜಯ್ ಶುಕ್ಲಾ ಅವರು ಪಿಟಿಐಗೆ ತಿಳಿಸಿದ್ದಾರೆ.
ನಟನ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಅವರ ಮನೆಗೆ ಅಂತಿಮ ದರ್ಶನಕ್ಕಾಗಿ ಕೊಂಡೊಯ್ಯಲಾಗುವುದು. ಮುಂಬೈನ ಪವನ್ ಹನ್ಸ್ ಸ್ಮಶಾನದಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.
1965 ರಲ್ಲಿ ಚಿತ್ರೋದ್ಯಮದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಧೀರಜ್ ಕುಮಾರ್ ಅವರು ಹಿಂದಿ ಸಿನಿಮಾ ಮಾತ್ರವಲ್ಲದೆ ಪಂಜಾಬಿ ಚಿತ್ರಗಳಲ್ಲೂ ಅಭಿನಯಿಸಿದ್ದರು. 1970 ಮತ್ತು 1984 ರ ನಡುವೆ 21 ಕ್ಕೂ ಹೆಚ್ಚು ಪಂಜಾಬಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ, ಧೀರಜ್ ಅವರು ಸ್ವಾಮಿ, ಹೀರಾ ಪನ್ನಾ, ರಾತೋಂ ಕಾ ರಾಜಾ, ರೋಟಿ ಕಪ್ಡಾ ಔರ್ ಮಕಾನ್ ಮತ್ತು ಇತರ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ನಟನೆಯ ಜೊತೆಗೆ, ಕುಮಾರ್ ದೂರದರ್ಶನದಲ್ಲೂ ತಮ್ಮ ಛಾಪು ಮೂಡಿಸಿದ್ದ ಧೀರಜ್ ಕುಮಾರ್ ಅವರು ಕ್ರಿಯೇಟಿವ್ ಐ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದು ಓಂ ನಮಃ ಶಿವಾಯ ಸೇರಿದಂತೆ ಹಲವು ಪೌರಾಣಿಕ ಮತ್ತು ಆಧ್ಯಾತ್ಮಿಕ ಟಿವಿ ಕಾರ್ಯಕ್ರಮಗಳನ್ನು ನಿರ್ಮಿಸಿದೆ.
Advertisement