

ಅಮೆರಿಕದಲ್ಲಿರುವ ವಿಶ್ವವಿದ್ಯಾಲಯದ ಶುಲ್ಕವನ್ನು ಪಾವತಿಸಲು ನನ್ನ ಬಳಿ ಹಣವಿಲ್ಲ ಎಂದು ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಪುತ್ರಿ ಸಮೈರಾ ದೆಹಲಿ ಹೈಕೋರ್ಟ್ ಮುಂದೆ ಹೇಳಿಕೊಂಡಿದ್ದು ಇದಕ್ಕೆ ತನ್ನ ಮಲತಾಯಿ ಪ್ರಿಯಾ ಕಪೂರ್ ಕಾರಣ ಎಂದು ಆರೋಪಿಸಿದ್ದರು. ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಮುಂದೆ ಸಮೈರಾ ಈ ಆರೋಪ ಮಾಡಿದರು. ಈ ವೇಳೆ ದಿವಂಗತ ಸಂಜಯ್ ಕಪೂರ್ ಅವರ ಪತ್ನಿ ಪ್ರಿಯಾ ಕಪೂರ್ ಪರ ವಕೀಲರು ಅಂತಹ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಆದರೆ ಈ ಸುಳ್ಳನ್ನು ಮಾಧ್ಯಮಗಳಲ್ಲಿ ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಕರಿಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಕಪೂರ್ ಮತ್ತು ಅವರ ಸಹೋದರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಅವರ ದಿವಂಗತ ತಂದೆ ಸಂಜಯ್ ಕಪೂರ್ ಅವರ 30,000 ಕೋಟಿ ಮೌಲ್ಯದ ಆಸ್ತಿ ಕುರಿತಂತೆ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ನಟಿಯ ಮಕ್ಕಳ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಸಮೈರಾ ಅಮೇರಿಕನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಳೆ. ಅವಳ ಶುಲ್ಕವನ್ನು ಎರಡು ತಿಂಗಳಿನಿಂದ ಪಾವತಿಸಲಾಗಿಲ್ಲ ಎಂದು ಹೇಳಿದರು. ಆದರೆ ವೈವಾಹಿಕ ಆದೇಶದ ಪ್ರಕಾರ, ಸಂಜಯ್ ಕಪೂರ್ ಮಕ್ಕಳ ಶಿಕ್ಷಣ ಮತ್ತು ವೆಚ್ಚಗಳನ್ನು ಪಾವತಿಸಬೇಕಾಗಿತ್ತು.
ಮಕ್ಕಳ ಎಸ್ಟೇಟ್ ಆಸ್ತಿಯು ಈಗ ಪ್ರತಿವಾದಿ ನಂ.1 (ಪ್ರಿಯಾ ಕಪೂರ್) ಅವರ ಬಳಿ ಇದೆ. ಅವರ ಜವಾಬ್ದಾರಿ ಇದೆ. ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸಂಜಯ್ ಕಪೂರ್ ಅವರು ಭರಿಸುವುದಾಗಿ ತಿಳಿಸಿದ್ದರು ಎಂದು ಜೇಠ್ಮಲಾನಿ ವಿವರಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪ್ರಿಯಾ ಕಪೂರ್ ಪರ ಹಿರಿಯ ವಕೀಲ ರಾಜೀವ್ ನಾಯರ್ ಅವರು, ಮಕ್ಕಳ ಎಲ್ಲ ಖರ್ಚುವೆಚ್ಚಗಳನ್ನು ತಮ್ಮ ಕಕ್ಷಿದಾರರು ಭರಿಸಿರುವುದಾಗಿ ಒತ್ತಿ ಹೇಳಿದರು. ಅಲ್ಲದೆ, ಇಂತಹ ವಿಚಾರಗಳು ದಿನಪತ್ರಿಕೆಗಳಲ್ಲಿ ಬರಬೇಕು ಎನ್ನುವ ಉದ್ದೇಶದಿಂದ ಅವುಗಳನ್ನು ಎತ್ತಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾ. ಜ್ಯೋತಿ ಸಿಂಗ್ ಇಂತಹ ವಿಚಾರಗಳನ್ನು ನ್ಯಾಯಾಲಯಕ್ಕೆ ತರದಂತೆ ಸೂಚಿಸಿದರು. ಪ್ರಿಯಾ ಕಪೂರ್ ಅವರನ್ನು ಪ್ರತಿನಿಧಿಸಿದ್ದ ಮತ್ತೋರ್ವ ಹಿರಿಯ ವಕೀಲರಾದ ಶೈಲ್ ತ್ರೆಹಾನ್ ಅವರಿಗೆ, ನಾನು ಈ ವಿಚಾರವಾಗಿ 30 ಸೆಕೆಂಡುಗಳಿಗೂ ಹೆಚ್ಚು ಕಾಲ ವ್ಯಯಿಸಲು ಇಷ್ಟಪಡುವುದಿಲ್ಲ. ಈ ವಿಚಾರಣೆಯು ಭಾವಾತಿರೇಕಗೊಳ್ಳುವುದನ್ನು ನಾನು ಬಯಸುವುದಿಲ್ಲ. ಹೀಗಾಗದಂತೆ ನೋಡಿಕೊಳ್ಳುವ ಹೊಣೆ ನಿಮ್ಮದು ಎಂದು ಎಚ್ಚರಿಸಿದರು.
ತಮ್ಮ ಮಲತಾಯಿ ಪ್ರಿಯಾ ಕಪೂರ್ ಅವರು, ಸಂಜಯ್ ಕಪೂರ್ ಅವರ ಉಯಿಲು ಫೋರ್ಜರಿ ಮಾಡಿ ಆಸ್ತಿಗಳನ್ನುಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕರಿಷ್ಮಾ ಕಪೂರ್ ಮಕ್ಕಳು ಆರೋಪಿಸಿರುವುದು ಪ್ರಕರಣದ ತಿರುಳಾಗಿದೆ. ಕರಿಷ್ಮಾಕಪೂರ್ ಸಂಜಯ್ ಅವರನ್ನು 2003ರಲ್ಲಿ ವರಿಸಿದ್ದರು. 2016ರಲ್ಲಿ ಅವರು ವಿಚ್ಛೇದನ ಪಡೆಯುವ ಮೂಲಕ 13 ವರ್ಷಗಳ ದಾಂಪತ್ಯ ಅಂತ್ಯಗೊಂಡಿತ್ತು. ಕಳೆದ ಜೂನ್‌ನಲ್ಲಿ ಸಂಜಯ್ ಇಂಗ್ಲೆಂಡ್‌ನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಆ ಬಳಿಕ ಸಂಜಯ್ ಅವರ ಮನೆಯಿಂದ ಪ್ರಿಯಾ ಕಪೂರ್ ನಮ್ಮನ್ನು ಅಕ್ರಮವಾಗಿ ಹೊರಗಟ್ಟಿದ್ದಾರೆ ಎಂದು ಕರಿಷ್ಮಾ ಅವರ ಅಪ್ರಾಪ್ತ ಮಕ್ಕಳು ತಮ್ಮ ತಾಯಿಯ ಮುಖೇನ ನ್ಯಾಯಾಲಯದ ಮೊರೆ ಹೋಗಿದ್ದರು.
Advertisement