

ಮುಂಬೈ: ಬಾಲಿವುಡ್ ನ ಹಿರಿಯ ದಿಗ್ಗಟ ನಟ ಧರ್ಮೇಂದ್ರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಬಾಲಿವುಡ್ ನ 'ಹೀಮ್ಯಾನ್' ಎಂದೇ ಹೆಸರುವಾಸಿಯಾಗಿದ್ದ ಧರ್ಮೇಂದ್ರ ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿದ್ದರು.
ಈ ತಿಂಗಳ ಆರಂಭದಲ್ಲಿ ತೀವ್ರ ಅನಾರೋಗ್ಯದಿಂದಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಡಿಸ್ಚಾರ್ಜ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಧರ್ಮೇಂದ್ರ ಅವರ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕರೆದೊಯ್ಯಲಾಗಿದ್ದು, ಮಗಳು ಇಶಾ ಡಿಯೋಲ್ ಸೇರಿದಂತೆ ಅನೇಕ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದ ಗಣ್ಯರು ಆಗಮಿಸುತ್ತಿದ್ದಾರೆ.
ಬಾಲಿವುಡ್ ಹಿರಿಯ ನಟರಾದ ಅಮಿತಾಬ್ ಬಚ್ಚನ್, ಅಮೀರ್ ಖಾನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸ್ಮಶಾನಕ್ಕೆ ಆಗಮಿಸಿದ್ದಾರೆ.
1960 ರಲ್ಲಿ 'ದಿಲ್ ಭಿ ತೇರಾ ಹಮ್ ಭಿ ತೇರೆ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಧರ್ಮೇಂದ್ರ, 1960 ರ ದಶಕದಲ್ಲಿ ಅನ್ಪದ್, ಬಂದಿನಿ, ಅನುಪಮಾ ಮತ್ತು ಆಯಾ ಸಾವನ್ ಝೂಮ್ ಕೆ ಮುಂತಾದ ಚಿತ್ರಗಳಲ್ಲಿ ಸಾಮಾನ್ಯ ಪಾತ್ರಗಳ ಮೂಲಕ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಶೋಲೆ, ಧರಮ್ ವೀರ್, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿಗಳಿಸಿದರು.
ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿದ 'ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ'ದಲ್ಲಿ ಧರ್ಮೇಂದ್ರ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ನಾಯಕ ನಟನಾಗಿರುವ ಅವರ ಮುಂದಿನ ಚಿತ್ರ 'Ikkis' ಡಿಸೆಂಬರ್ 25 ರಂದು ಬಿಡುಗಡೆಗೆ ಸಜ್ಜಾಗಿದೆ.
ಧರ್ಮೇಂದ್ರ ಅವರ ಪ್ರಮುಖ ಸಿನಿಮಾಗಳು:
ಧರ್ಮೇಂದ್ರ ಅವರು ಶೋಲೆ (1975) ಮತ್ತು ಚುಪ್ಕೆ ಚುಪ್ಕೆ (1975) ಸೇರಿದಂತೆ ಅನೇಕ ಸೂಪರ್-ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಫೂಲ್ ಔರ್ ಪತ್ತರ್ (1966), ಸೀತಾ ಔರ್ ಗೀತಾ (1972), ಧರಮ್ ವೀರ್ (1977), ಮತ್ತು ಮೇರಾ ಗಾಂವ್ ಮೇರಾ ದೇಶ್ (1971). ಅವರು ಪ್ರತಿಗ್ಯಾ (1975), ಆಂಖೇನ್ (1968), ಮತ್ತು ಬಾಂದಿನಿ (1963) ನಂತಹ ಸಿನಿಮಾಗಳಿಂದಲೂ ಅವರು ಹೆಸರುವಾಸಿಯಾಗಿದ್ದರು.
ನಟ ಧರ್ಮೇಂದ್ರ ಅವರು 2004 ರಲ್ಲಿ ಬಿಜೆಪಿಯಿಂದ ರಾಜಸ್ಥಾನದ ಬಿಕಾನೇರ್‌ನಿಂದ ಲೋಕಸಭೆಗೆ ಆಯ್ಕೆಯಾಗಿ ಸಂಸದರಾಗಿ ಕಾರ್ಯನಿರ್ವಹಿಸಿದ್ದರು.
ಧರ್ಮೇಂದ್ರ ಅವರು ಇಬ್ಬರು ಪತ್ನಿಯರಾದ ಪ್ರಕಾಶ್ ಕೌರ್ ಮತ್ತು ಹೇಮಾ ಮಾಲಿನಿ, ಆರು ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತ ಡಿಯೋಲ್, ಅಜೀತಾ ಡಿಯೋಲ್, ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರನ್ನು ಅಗಲಿದ್ದಾರೆ.
ಧರ್ಮೇಂದ್ರ ಅವರ ನಿಧನಕ್ಕೆ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Advertisement