
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ನಟಿಯ ಉದ್ಯಮಿ ಪತಿ ರಾಜ್ ಕುಂದ್ರಾ ವಿದೇಶ ಪ್ರವಾಸವನ್ನು ಬಾಂಬೆ ಹೈಕೋರ್ಟ್ ನಿರ್ಬಂಧಿಸಿದೆ. ದಂಪತಿಗಳು ಲಾಸ್ ಏಂಜಲೀಸ್ ಅಥವಾ ಇತರ ವಿದೇಶಗಳಿಗೆ ಪ್ರಯಾಣಿಸಲು ಬಯಸಿದರೆ 60 ಕೋಟಿ ಠೇವಣಿ ಇಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ. 60 ಕೋಟಿ ಠೇವಣಿ ಇಟ್ಟ ನಂತರವೇ ವಿದೇಶ ಪ್ರವಾಸ ಮಾಡಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದ್ದು ದಂಪತಿ ವಿರುದ್ಧ ಹೊರಡಿಸಲಾದ ಲುಕ್ ಔಟ್ ನೋಟಿಸ್ ಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಉದ್ಯಮಿ ದೀಪಕ್ ಕೊಠಾರಿ ಅವರನ್ನು ಸಾಲ ಮತ್ತು ಹೂಡಿಕೆ ಒಪ್ಪಂದದ ಅಡಿಯಲ್ಲಿ ಸುಮಾರು 60 ಕೋಟಿ ವಂಚಿಸಿದ ಆರೋಪದ ಮೇಲೆ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಆಗಸ್ಟ್ 14ರಂದು ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಕುಂದ್ರಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಈ ಹಿಂದೆ ನಟಿ ಮತ್ತು ಅವರ ಪತಿಯ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು.
2015 ಮತ್ತು 2023ರ ನಡುವೆ ತಮ್ಮ ಕಂಪನಿಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನಲ್ಲಿ 60 ಕೋಟಿ ಹೂಡಿಕೆ ಮಾಡಲು ಒತ್ತಾಯಿಸಿದ್ದು ನಂತರ ಆ ಹಣವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಕೊಠಾರಿ ದಂಪತಿಗಳ ವಿರುದ್ಧ ದೂರು ದಾಖಲಿಸಿದ್ದರು. ವಿಚಾರಣೆ ವೇಳೆ 60 ಕೋಟಿ ರೂ.ಗಳ ಪೂರ್ಣ ಮೊತ್ತವನ್ನು ಠೇವಣಿ ಇರಿಸಿ, ನಂತರ ನಾವು ಅರ್ಜಿಯನ್ನು ಪರಿಗಣಿಸುತ್ತೇವೆ ಎಂದು ಪೀಠ ಹೇಳಿದ್ದು ಮುಂದಿನ ವಿಚಾರಣೆಯ ದಿನಾಂಕವನ್ನು ಅಕ್ಟೋಬರ್ 14ಕ್ಕೆ ನಿಗದಿಪಡಿಸಲಾಗಿದೆ.
ದಂಪತಿಗಳ ಅರ್ಜಿಯು ಅಕ್ಟೋಬರ್ 2025ರಿಂದ ಜನವರಿ 2026ರವರೆಗೆ ಲುಕ್ ಔಟ್ ನೋಟಿಸ್ ಅಮಾನತುಗೊಳಿಸುವಂತೆ ಕೋರಿದೆ. 60 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಮುಂಬೈ ಪೊಲೀಸರ ಮುಂದೆ ದಾಖಲಿಸಲಾದ ತಮ್ಮ ಹೇಳಿಕೆಯಲ್ಲಿ ಶಿಲ್ಪಾ ಶೆಟ್ಟಿ, ತಮ್ಮ ಪತಿ ರಾಜ್ ಕುಂದ್ರಾ ಅವರೊಂದಿಗೆ ಕಂಪನಿಯನ್ನು ಸ್ಥಾಪಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಕ್ಟೋಬರ್ 4ರಂದು EOW ತಂಡವು ನಟಿಯ ನಿವಾಸದಲ್ಲಿ ಅವರ ಹೇಳಿಕೆಯನ್ನು ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement