

ನವದೆಹಲಿ: ಕರಣ್ ಜೋಹರ್ ನಿರ್ದೇಶನದ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ 20 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಅವರು ಚಿತ್ರಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವು ಮದುವೆ, ಪ್ರೀತಿ, ದಾಂಪತ್ಯ ದ್ರೋಹ ಮತ್ತು ಸಂಬಂಧಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಚಿತ್ರಿಸುತ್ತದೆ. ಕರಣ್ ತಮ್ಮ ಚಿತ್ರದಲ್ಲಿ ಕೆಲವು ನ್ಯೂನತೆಗಳು ಮತ್ತು ಚಿತ್ರದಲ್ಲಿ ಅನಗತ್ಯವಾದ ಕೆಲವು ಹಾಡುಗಳಿವೆ. ಈ ಸಿನಿಮಾ ಎಂದಿಗೂ ಅಕ್ರಮ ಸಂಬಂಧವನ್ನು ಬೆಂಬಲಿಸಲಿಲ್ಲ ಎಂದು ಹೇಳಿದ್ದಾರೆ.
20 ವರ್ಷಗಳ ಹಿಂದೆ ಚಿತ್ರ ಬಿಡುಗಡೆಯಾದಾಗ, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. ಕೆಲವರು ಇದನ್ನು ಕರಣ್ ಜೋಹರ್ ಅವರ ಅತ್ಯುತ್ತಮ ಕೃತಿ ಎಂದು ಕರೆದರು. ಆದರೆ ಇತರರು ಇದನ್ನು "ಸಂಸ್ಕೃತಿ ವಿರೋಧಿ" ಎಂದು ಕರೆದರು. ಈ ಚಿತ್ರದಲ್ಲಿ ಶಾರುಖ್ ಖಾನ್, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್, ಪ್ರೀತಿ ಜಿಂಟಾ ಮತ್ತು ಅಮಿತಾಬ್ ಬಚ್ಚನ್ ನಟಿಸಿದ್ದರು.
ಚಿತ್ರದ 20ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಕರಣ್ ಜೋಹರ್ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ಪೋಸ್ಟ್ ಅನ್ನು ಹಂಚಿಕೊಂಡರು. ಚಿತ್ರ ಬಿಡುಗಡೆಯ ಮೊದಲು ಮತ್ತು ನಂತರದ ಅನೇಕ ಸಂದರ್ಭಗಳನ್ನು ಅವರು ಹಂಚಿಕೊಂಡರು. ಚಿತ್ರದಲ್ಲಿ ಕೆಲವು ನ್ಯೂನತೆಗಳಿವೆ ಮತ್ತು ಕೆಲವು ಹಾಡುಗಳು ಅನಗತ್ಯವಾಗಿವೆ ಎಂದು ಕರಣ್ ಕೂಡ ಒಪ್ಪಿಕೊಂಡರು. ಆದಾಗ್ಯೂ, ಚಿತ್ರದ ಭಾವನೆಗಳು ಮತ್ತು ಉದ್ದೇಶ ಸರಿಯಾಗಿದೆ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.
ನಾನು ಪ್ರಿವ್ಯೂ ವೀಕ್ಷಿಸುತ್ತಿದ್ದಾಗ ಹಲವು ಘಟನೆಗಳು ನಡೆದವು ಎಂದು ಕರಣ್ ಜೋಹಾರ್ ಹೇಳಿದ್ದಾರೆ. ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿ ಅಭಿನಯದ ದೃಶ್ಯವೊಂದನ್ನು ನೋಡಿ ಪ್ರೇಕ್ಷಕರು ದಿಗ್ಭ್ರಮೆಗೊಂಡಿದ್ದರು. ‘ನನ್ನ ಮುಂದೆ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಮಧ್ಯಮ ವಯಸ್ಸಿನ ದಂಪತಿ ಕುಳಿತಿದ್ದರು. ಆ ದೃಶ್ಯವು ಯಾವುದೇ ಕನಸಿನ ಸನ್ನಿವೇಶವಲ್ಲ, ಬದಲಿಗೆ ನೈಜ ದೃಶ್ಯ ಎಂದು ತಿಳಿಯುತ್ತಿದ್ದಂತೆ ಆ ವ್ಯಕ್ತಿ ಕೋಪದಿಂದ ಹೆಂಡತಿಯನ್ನು ನೋಡುತ್ತಾ ತಕ್ಷಣವೇ ಚಿತ್ರಮಂದಿರದಿಂದ ಹೊರನಡೆದರು. ಅದನ್ನು ನೋಡಿ ನನ್ನ ಹೃದಯವೇ ನಿಂತಂತಾಯಿತು ಎಂದು ಕರಣ್ ಜೋಹರ್ ಬರೆದುಕೊಂಡಿದ್ದಾರೆ.
ಮತ್ತೊಂದು ಘಟನೆ, ನಿಮ್ಮ ಸಿನಿಮಾ ಎಂದರೆ ಹಾಡು, ನೃತ್ಯ ಮತ್ತು ಕುಟುಂಬದ ಮೌಲ್ಯಗಳಿರುವ ಸಂತೋಷದ ಸಿನಿಮಾ ಎಂದು ಭಾವಿಸಿ ನನ್ನ ಮಗಳನ್ನು ಕರೆದುಕೊಂಡು ಬಂದಿದ್ದೆ. ಆದರೆ ಇಂದು ಆಕೆಗೆ ವಿಚ್ಛೇದನವಾಗಿದೆ. ಇಂತಹ ಸಮಯದಲ್ಲಿ ನಾನು ಇದನ್ನು ನೋಡಬೇಕಾಯಿತೇ? ನಿಮಗೇನು ನಾಚಿಕೆಯಾಗುವುದಿಲ್ಲವೇ ಅಂತ ಕಿರುಚಾಡಿದ್ದರು ಎಂದು ಮಹಿಳೆಯೊಬ್ಬರು ನನಗೆ ತರಾಟೆಗೆ ತೆಗೆದುಕೊಂಡಿದ್ದರು ಎಂದು ಕರಣ್ ಜೋಹರ್ ನೆನಪಿಸಿಕೊಂಡರು.