

ಜೆನ್ ಝಡ್ ಪ್ರತಿಭಟನಾಕಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಬಾಲಿವುಡ್ ನಟ ಸೋನು ಸೂದ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಯುವಕರಿಂದಲೇ ಸ್ಟಾರ್ ಆಗಿರೋದು ಎಂದು ತಿರುಗೇಟು ನೀಡಿದ್ದಾರೆ.
Gen Z ಪ್ರತಿಭಟನಾಕಾರರ ಬಗ್ಗೆ ಕಂಗನಾ ಅವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೋನು ಸೂದ್, ಯುವಕರನ್ನು ಗೌರವಿಸಬೇಕು ಮತ್ತು ಅವರ ಧ್ವನಿಯನ್ನು ಆಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು, ಕಂಗನಾ ಅವರ ಕಾಮೆಂಟ್‌ಗಳನ್ನು ನಾನು ಕೇಳಿಲ್ಲ ಎಂದು ಆರಂಭದಲ್ಲಿ ಹೇಳಿದರು. ಬಳಿಕ, ಯುವಜನರ ಬಗ್ಗೆ ಮಾತನಾಡುತ್ತಾ, ಈ ಯುವಕರೇ ನಟರನ್ನು ಸ್ಟಾರ್ ಮಾಡುತ್ತಾರೆ. ಈ ಸ್ಥಾನಕ್ಕೆ ತಲುಪಲು ಅವರೇ ಕಾರಣ. ಅವರು ನಮ್ಮ ಜೊತೆ ಇರುವವರೆಗೂ ನಾವು ಬೆಳೆಯುತ್ತೇವೆ. ಅವರು ದೂರವಾದರೆ ಅದು ಕಷ್ಟವಾಗುತ್ತದೆ. ಆದ್ದರಿಂದ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು ಎಂದರು.
‘ನೀವು ನಟರಾಗಿರಲಿ, ವೈದ್ಯರಾಗಿರಲಿ ಅಥವಾ ಬೇರೆ ಯಾವುದೇ ವೃತ್ತಿಯಲ್ಲಿರಲಿ, ಜನರು ನಿಮ್ಮನ್ನು ಬೆಂಬಲಿಸುವವರೆಗೂ ಮಾತ್ರ ನಿಮ್ಮ ಅಸ್ತಿತ್ವಕ್ಕೆ ಅರ್ಥ ಇರುತ್ತದೆ ಎಂದು ಸೋನು ಸೂದ್ ಹೇಳಿದ್ದಾರೆ.
ಕಂಗನಾ ಅವರು ‘ಜನರೇಷನ್ ಗಟರ್’ ಎಂದು ಪ್ರತಿಭಟನಾಕರರನ್ನು ಟೀಕಿಸಿದ ಬಗ್ಗೆ ಪ್ರಶ್ನಿಸಿದಾಗ, ಅವರು ಹಾಗೆ ಹೇಳಿದ್ದರೆ, ಅದು ಸರಿಯಲ್ಲ. ಅಂತಹ ಮಾತು ಹೇಳಬಾರದಿತ್ತು. ಅವರು ಹಾಗೆ ಹೇಳಿದ್ದರೆ, ಅದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಮಾತನಾಡುವ ಮೊದಲು ನಿಮ್ಮ ಮಾತುಗಳನ್ನು ತೂಗಿ ನೋಡಿ ಎಂಬ ಮಾತಿದೆ. ನೀವು ಮಾತನಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಬಹಳ ಮುಖ್ಯ ಏಕೆಂದರೆ ಸಾರ್ವಜನಿಕರು ದೇವರ ಮತ್ತೊಂದು ರೂಪ ಎಂದು ನಟ ಹೇಳಿದ್ದಾರೆ.