

ಚಿತ್ರಮಂದಿರಗಳ ಒಳಗೆ ಚಿತ್ರದ ದೃಶ್ಯಗಳನ್ನು ಅನಧಿಕೃತವಾಗಿ ರೆಕಾರ್ಡ್ ಮಾಡುವುದು ಮತ್ತು ಹಂಚಿಕೊಳ್ಳುವುದರ ವಿರುದ್ಧ 'ರಾಮಾಯಣ' ಚಿತ್ರತಂಡ ಕಠಿಣ ಎಚ್ಚರಿಕೆ ನೀಡಿದೆ. ಇಂತಹ ದೃಶ್ಯಗಳನ್ನು ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳು ಹಾಗೂ ಸಂದೇಶ ಕಳುಹಿಸುವ ಆ್ಯಪ್‌ಗಳಲ್ಲಿ (messaging apps) ಹಂಚಿಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರುವ ಹೇಳಿಕೆಯೊಂದರಲ್ಲಿ ಚಿತ್ರತಂಡ, 'ನಮಿತ್ ಮಲ್ಹೋತ್ರಾ ಅವರ 'ರಾಮಾಯಣ' ಚಿತ್ರದ ದೃಶ್ಯಗಳನ್ನು ಚಿತ್ರಮಂದಿರಗಳ ಒಳಗೆ ಅನಧಿಕೃತವಾಗಿ ಚಿತ್ರೀಕರಿಸಲಾಗುತ್ತಿದೆ ಮತ್ತು ಅವುಗಳನ್ನು ಸಾಮಾಜಿಕ ಜಾಲತಾಣಗಳು ಹಾಗೂ ಸಂದೇಶ ಕಳುಹಿಸುವ ವೇದಿಕೆಗಳಲ್ಲಿ ಹಂಚಲಾಗುತ್ತಿದೆ ಎಂಬ ವಿಷಯ ನಮ್ಮ ಗಮನಕ್ಕೆ ಬಂದಿದೆ' ಎಂದು ತಿಳಿಸಿದೆ.
ಅಲ್ಲದೆ, 'ಕಮರ್ಷಿಯಲ್ ಐಪಿ ಸೂಟ್ (ಎಲ್) ಸಂಖ್ಯೆ 37230/2026' ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಂಬೆ ಹೈಕೋರ್ಟ್ 2026ರ ನವೆಂಬರ್ 2 ಮತ್ತು ನವೆಂಬರ್ 6ರಂದು ಹೊರಡಿಸಿದ ಎರಡು ಆದೇಶಗಳ ಬಗ್ಗೆಯೂ ಚಿತ್ರತಂಡವು ಉಲ್ಲೇಖಿಸಿದೆ.
'ಗೌರವಾನ್ವಿತ ಬಾಂಬೆ ಹೈಕೋರ್ಟ್, 'ಕಮರ್ಷಿಯಲ್ ಐಪಿ ಸೂಟ್ (ಎಲ್) ಸಂಖ್ಯೆ 37230/2026' ಪ್ರಕರಣದಲ್ಲಿ, ನವೆಂಬರ್ 2 ಮತ್ತು ನವೆಂಬರ್ 6 ರಂದು ಹೊರಡಿಸಿದ ಆದೇಶಗಳ ಮೂಲಕ, ಈ ಚಿತ್ರವನ್ನು ಅಥವಾ ಅದರ ಯಾವುದೇ ಭಾಗವನ್ನು ಅನುಮತಿಯಿಲ್ಲದೆ ರೆಕಾರ್ಡ್ ಮಾಡುವುದನ್ನು, ಅಪ್‌ಲೋಡ್ ಮಾಡುವುದನ್ನು, ಹಂಚಿಕೊಳ್ಳುವುದನ್ನು ಅಥವಾ ಬೇರೆ ಯಾವುದೇ ರೀತಿಯಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿದೆ. ಹೀಗೆ ಮಾಡುವುದು 'ಹಕ್ಕುಸ್ವಾಮ್ಯ ಉಲ್ಲಂಘನೆ' ಆಗುತ್ತದೆ. ಇದು 'ಕಾಪಿರೈಟ್ ಆಕ್ಟ್, 1957', 'ಸಿನೆಮಾಟೋಗ್ರಾಫ್ ಆಕ್ಟ್, 1952', 'ಬಿಎನ್‌ಎಸ್ (BNS), 2023' ಮತ್ತು 'ಐಟಿ ಆಕ್ಟ್, 2000'ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕಾಗಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಅಲ್ಲದೆ, ಇಂತಹ ಕೃತ್ಯವು ನ್ಯಾಯಾಲಯದ ನಿಂದನೆಗೂ (contempt of court) ಕಾರಣವಾಗುತ್ತದೆ' ಎಂದು ಎಚ್ಚರಿಸಿದೆ.
ಅನಧಿಕೃತ ದೃಶ್ಯಗಳನ್ನು ಚಿತ್ರೀಕರಿಸುವುದರಿಂದ ಅಥವಾ ಹಂಚಿಕೊಳ್ಳುವುದರಿಂದ ದೂರವಿರಬೇಕೆಂದು ಹಾಗೂ ಈಗಾಗಲೇ ಪೋಸ್ಟ್ ಮಾಡಲಾಗಿರುವ ಅಂತಹ ವಿಷಯಗಳನ್ನು ಅಳಿಸಿಹಾಕಬೇಕೆಂದು ತಂಡವು ಸಾರ್ವಜನಿಕರನ್ನು ಕೋರಿದೆ.
'ಅಂತಹ ಯಾವುದೇ ವಿಷಯವನ್ನು ರೆಕಾರ್ಡ್ ಮಾಡುವುದು, ಪೋಸ್ಟ್ ಮಾಡುವುದು ಅಥವಾ ಹಂಚಿಕೊಳ್ಳುವುದನ್ನು ತಡೆಯಲು ಮತ್ತು ಈಗಾಗಲೇ ಪೋಸ್ಟ್ ಮಾಡಿರುವುದನ್ನು ಅಳಿಸಲು ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ. ಅಪರಾಧಿಗಳ ವಿರುದ್ಧ ಅಧಿಕಾರಿಗಳಿಗೆ ಮತ್ತು ವೇದಿಕೆಗಳಿಗೆ ವರದಿ ಮಾಡಲಾಗುತ್ತದೆ ಮತ್ತು ಯಾವುದೇ ಸೂಚನೆ ಇಲ್ಲದೆ ಕ್ರಿಮಿನಲ್, ಸಿವಿಲ್ ಮತ್ತು ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ' ಎಂದು ಹೇಳಿದೆ.
ನಿತೇಶ್ ತಿವಾರಿ ನಿರ್ದೇಶನದ ಮತ್ತು ನಮಿತ್ ಮಲ್ಹೋತ್ರಾ ನಿರ್ಮಿಸಿದ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ.
ಎರಡು ಭಾಗಗಳ ಸಿನಿಮೀಯ ರೂಪಾಂತರದಲ್ಲಿ ಹನುಮಾನ್ ಪಾತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ಕೂಡ ಕಾಣಿಸಿಕೊಂಡಿದ್ದಾರೆ. ಭಾಗ 1 ನವೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.