ಬಾಲಿವುಡ್ ನಟನ ಸಂಕಷ್ಟಕ್ಕೆ ಮಿಡಿದ ಸೋಶಿಯಲ್ ವರ್ಕರ್, ಶರದ್ ಕಪೂರ್‌ಗೆ ಆರ್ಥಿಕ ನೆರವು ನೀಡಿದ ರಾಹುಲ್ ಗುಪ್ತಾ! VIDEO

ಮುಂಬೈಗೆ ಭೇಟಿ ನೀಡಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ನಟನನ್ನು ಭೇಟಿಯಾದ ಗುಪ್ತಾ, ಅವರಿಗೆ ಹಣಕಾಸಿನ ಸಹಾಯ ಮಾಡಿದ್ದಾರೆ.
Sharad Kapoor
ಶರದ್ ಕಪೂರ್‌
Updated on: 

ಮುಂಬೈ: ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಬಾಲಿವುಡ್ ನಟ ಶರದ್ ಕಪೂರ್ ಅವರಿಗೆ, ಸಾಮಾಜಿಕ ಕಾರ್ಯಕರ್ತ ರಾಹುಲ್ ಗುಪ್ತಾ ಸೋಮವಾರ ಆರ್ಥಿಕ ನೆರವು ನೀಡಿದ್ದಾರೆ.

ಮುಂಬೈಗೆ ಭೇಟಿ ನೀಡಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ನಟನನ್ನು ಭೇಟಿಯಾದ ಗುಪ್ತಾ, ಅವರಿಗೆ ಹಣಕಾಸಿನ ಸಹಾಯ ಮಾಡಿದ್ದಾರೆ. ಈ ಭೇಟಿಯ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 'ಜೋಶ್' (Josh) ಚಿತ್ರದ ನಟನಿಗೆ ಬೆಂಬಲ ನೀಡಲು ಮುಂದೆ ಬರುವಂತೆ ಇತರರಿಗೆ ಮನವಿ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ರಾಹುಲ್, ನಿಮ್ಮ ಜೀವನದಲ್ಲಿ ಶೀಘ್ರದಲ್ಲೇ ಸಂತೋಷ ಮತ್ತು ಹೊಸ ಅವಕಾಶಗಳು ಬರಲಿ ಹಾಗೂ ನಿಮಗೆ ಉತ್ತಮ ಕೆಲಸ ಸಿಗಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ನಿಮ್ಮ ಪ್ರತಿಭೆ ನೋಡಲು ಬಯಸುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕಾರಿನ ಮುಂಭಾಗದಲ್ಲಿ ಕುಳಿತ ಶರದ್ ಕಪೂರ್ ಅವರನ್ನು ಭೇಟಿಯಾಗಿರುವ ಗುಪ್ತಾ, ತಮ್ಮ ಜೇಬಿನಿಂದ ಹಣವನ್ನು ತೆಗೆದು ನಟನಿಗೆ ನೀಡುವುದು ವಿಡಿಯೋದಲ್ಲಿದೆ.

ಅವರು ಸಂಕಷ್ಟದಲ್ಲಿದ್ದಾರೆ; ಇಂತಹ ಸಮಯದಲ್ಲಿ ನಾವು ಅವರ ಬೆಂಬಲಕ್ಕೆ ನಿಲ್ಲದಿದ್ದರೆ, ಮಾನವೀಯತೆ ಎಲ್ಲಿ ಉಳಿಯುತ್ತದೆ? ಆದ್ದರಿಂದ, ಅವರು ಸಂಕಷ್ಟದಲ್ಲಿರುವುದರಿಂದ ಎಲ್ಲರೂ ಅವರೊಂದಿಗೆ ನಿಂತು ಬೆಂಬಲಿಸಬೇಕೆಂದು ನಾನು ಬಯಸುತ್ತೇನೆ. ನೀವೆಲ್ಲರೂ ಅವರಿಗೆ ಸಹಾಯ ಮಾಡಿ ಎಂದು ಗುಪ್ತಾ ಹೇಳುತ್ತಾರೆ. ತಮಗೆ ವೈಯಕ್ತಿಕವಾಗಿ ಪರಿಚಯವಿಲ್ಲದಿದ್ದರೂ, ಸಹಾಯ ಮಾಡಲು ಮುಂದೆ ಬಂದಿದ್ದಕ್ಕಾಗಿ ಶರದ್ ಅವರು ಗುಪ್ತಾ ಅವರಿಗೆ ಧನ್ಯವಾದ ಅರ್ಪಿಸುತ್ತಾರೆ.

ಸೋಮವಾರದಂದು, ನಟ ಸೋನು ಸೂದ್ ಕೂಡ ಶರದ್ ಅವರನ್ನು ಭೇಟಿಯಾಗಿದ್ದರು. ಡಾ. ಖಾಲಿದ್ ಶೇಖ್ ಅವರೊಂದಿಗೆ ನಟನನ್ನು ಭೇಟಿಯಾಗಿದ್ದರು ಎಂದು ವರದಿಯಾಗಿದೆ. ಶರದ್ ಅವರು ಚಲನಚಿತ್ರೋದ್ಯಮದ ಸದಸ್ಯರಲ್ಲಿ ಆರ್ಥಿಕ ನೆರವಿಗಾಗಿ ಮನವಿ ಮಾಡಿದ ಕೆಲವೇ ದಿನಗಳಲ್ಲಿ ಈ ಭೇಟಿ ನಡೆದಿದ್ದು, ಇಬ್ಬರೂ ಒಂದು ಸಂಭಾವ್ಯ ಯೋಜನೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಖಿನ್ನತೆಯೊಂದಿಗೆ ಹೋರಾಡುತ್ತಿರುವ ಕಪೂರ್ ಸುಮಾರು ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು ಎಂದು ವರದಿಯಾಗಿದೆ. ಈ ಹಿಂದೆ ತಮ್ಮ ಮಾನಸಿಕ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದ ಶರದ್, ಲೈಂಗಿಕ ಕಿರುಕುಳದ ಸುಳ್ಳು ಆರೋಪಕ್ಕೆ ಒಳಗಾದ ನಂತರ ತಾನು ಖಿನ್ನತೆಗೆ (depression) ಒಳಗಾಗಿದ್ದಾಗಿ ತಿಳಿಸಿದ್ದರು.

Sharad Kapoor
ಆರ್ಥಿಕ ಸಹಾಯಕ್ಕಾಗಿ ಮನವಿ ವಿಡಿಯೋ ವೈರಲ್: 'ಜೋಶ್' ನಟ ಶರದ್ ಕಪೂರ್ ಭೇಟಿ ಮಾಡಿದ ಸೋನು ಸೂದ್! Video

2024ರಲ್ಲಿ 32 ವರ್ಷದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಈ ನಟನ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು. ಶರದ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಯಾವುದೇ ಕಾರಣವಿಲ್ಲದೆ ಯಾರಾದರೂ ನಿಮ್ಮ ಮೇಲೆ ಆರೋಪ ಹೊರಿಸಿದಾಗ, ಸಹಜವಾಗಿಯೇ ನೋವಾಗುತ್ತದೆ. ಹಾಗಾಗಿ ನಾನು ಖಿನ್ನತೆಗೆ ಒಳಗಾಗಿದ್ದೆ. ಯಾರಿಗೂ ಮುಖ ತೋರಿಸಲು ಅಥವಾ ಕೆಲಸ ಮಾಡಲು ನನಗೆ ಮನಸ್ಸಾಗುತ್ತಿರಲಿಲ್ಲ. ಆದರೆ ಈಗ ನಾನು ನಿರ್ಧರಿಸಿದ್ದೇನೆ. ನಾನು ಚಿತ್ರರಂಗಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ: ದಯವಿಟ್ಟು ನನಗೆ ಸಹಾಯ ಮಾಡಿ. ನನಗಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಮತ್ತೆ ಕೆಲಸ ಮಾಡಿ ಸಂಪಾದಿಸುವಂತಾಗಲಿ ಎಂದು ಅವರು ಕೇಳಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X