

ನಟ ಶರದ್ ಕಪೂರ್ ಅವರು ಇತ್ತೀಚೆಗೆ ಬಾಲಿವುಡ್ ಗೆ ಭಾವನಾತ್ಮಕ ಮನವಿ ಮಾಡಿದ್ದು, ಆರೋಗ್ಯ ಮತ್ತು ಹಣದ ತೊಂದರೆಗಳ ನಡುವೆಯೂ ಕೆಲಸ ಮತ್ತು ಆರ್ಥಿಕ ಸಹಾಯವನ್ನು ಕೋರಿದ್ದರು. ಕಳೆದ ಎರಡ್ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದೇನೆ, ಹಿರಿಯ ಸಹೋದ್ಯೋಗಿಗಳು, ನಾನು ಮತ್ತೆ ಚೇತರಿಸಿಕೊಳ್ಳಲು ಸಹಾಯ ಹಸ್ತ ಚಾಚಬೇಕು ಎಂದು ಕೇಳಿಕೊಂಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಾಲಿವುಡ್ ನಟ ಸೋನು ಸೂದ್ ಅವರ ಸೋಮವಾರ ಮುಂಬೈನಲ್ಲಿ ಶರದ್ ಅವರನ್ನು ಭೇಟಿಯಾದರು.
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಸೋನು ಸೂದ್ ಅವರು ಶರದ್ ಕಪೂರ್ ಅವರನ್ನು ಭೇಟಿಯಾಗಿ ಸಂಭಾಷಣೆ ನಡೆಸುತ್ತಿರುವುದು ಕಂಡುಬಂದಿದೆ.
"ಶರದ್ ಕಪೂರ್ ಅವರು, ತಮ್ಮನ್ನು ಭೇಟಿ ಮಾಡಿದ ಸೋನು ಸೂದ್ ಅವರನ್ನು ಶ್ಲಾಘಿಸಿದ್ದು, ಯಾರಿಗಾದರೂ ಬೆಂಬಲ ಬೇಕಾದಾಗ ಮೊದಲು ಕಾಣಿಸಿಕೊಳ್ಳುವುದು ಸೋನು ಭಾಯ್. ಇದು ಮಾನವೀಯತೆ!" ಎಂದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸೋನು ಸೂದ್ ಅವರು ಶರದ್ ಅವರ ಕಾಲಿನ ಗಾಯಕ್ಕೆ ಚಿಕಿತ್ಸೆ ಕೊಡಿಸಲು ವೈದ್ಯಕೀಯ ತಂಡದ ವ್ಯವಸ್ಥೆ ಮಾಡಿದ್ದಾರೆ ಮತ್ತು ಅವರಿಗೆ ಅಗತ್ಯವಾದ ವೈದ್ಯಕೀಯ ಸಾಮಗ್ರಿಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಶರದ್ ಕಪೂರ್ ಅವರು 1996 ರ ದಸ್ತಕ್ ಚಿತ್ರದೊಂದಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ನಂತರ ಅವರು ಜೋಶ್, ಲಕ್ಷ್ಯ ಮತ್ತು ಜೈ ಹೋ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಸಿದ್ದಾರೆ.