

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಹಿಂದಿ ಉಚ್ಚಾರಣೆ (Hindi accent) ಮತ್ತು ಮಾತನಾಡುವ ಶೈಲಿಯ ಬಗ್ಗೆ ಬರುತ್ತಿರುವ ಟೀಕೆಗಳನ್ನು ಬಾಲಿವುಡ್ ಗೀತೆ ರಚನೆಕಾರ ಜಾವೇದ್ ಅಖ್ತರ್ ಖಂಡಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಹಿಂದಿ ಉಚ್ಚಾರಣೆಯ ಬಗ್ಗೆ ವ್ಯಕ್ತವಾದ ಟೀಕೆಗಳನ್ನು ಜಾವೇದ್ ಅಖ್ತರ್ ಖಂಡಿಸಿದ್ದಾರೆ. ಮತ್ತೊಂದು ಭಾಷೆಯನ್ನು ಮಾತನಾಡುವಾಗ ಎದುರಾಗುವ ಸವಾಲುಗಳನ್ನು ಪರಿಗಣಿಸದೆ, ಒಬ್ಬರ ಉಚ್ಚಾರಣೆಯನ್ನು ಟೀಕಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ ನಟಿಯ ಬೆಂಬಲಕ್ಕೆ ನಿಂತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, "ತಮಿಳು ನಟಿ ರಶ್ಮಿಕಾ ಅವರ ಉಚ್ಚಾರಣೆಯ ಬಗ್ಗೆ ಯಾರಿಗೆ ಸಮಸ್ಯೆಯಿದೆಯೋ, ಅವರಿಗೆ ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ತಮಿಳಿನ ಕೆಲವು ಸಾಲುಗಳನ್ನು ಓದಲು ನೀಡೋಣ; ಆಗ ಅವರು ಎಷ್ಟು ಚೆನ್ನಾಗಿ ತಮಿಳು ಉಚ್ಚರಿಸುತ್ತಾರೆ ಎಂದು ನೋಡೋಣ. ಇಂತಹ ಕೃತಕ ಮತ್ತು ಆಧಾರರಹಿತ 'ಭಾಷಾ ಶ್ರೇಷ್ಠತೆ'ಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ವಿವಿಧಚಿತ್ರೋದ್ಯಮಗಳಲ್ಲಿ ಕೆಲಸ ಮಾಡುವ ನಟಿಯರು, ತಾವು ಮಾತನಾಡುವ ಪ್ರತಿಯೊಂದು ಭಾಷೆಯನ್ನೂ ಯಾವುದೇ ಉಚ್ಚಾರಣಾ ವ್ಯತ್ಯಾಸವಿಲ್ಲದೆ (accent-free) ಮಾತನಾಡಬೇಕೆಂದು ನಿರೀಕ್ಷಿಸುವ ಜನರ ಮನಸ್ಥಿತಿಯನ್ನು ಅಖ್ತರ್ ಪ್ರಶ್ನಿಸಿದ್ದಾರೆ. ಅವರ ಈ ಹೇಳಿಕೆಯು ಭಾರತೀಯ ಚಿತ್ರರಂಗದಲ್ಲಿ ಪ್ರಾದೇಶಿಕ ಗುರುತುಗಳು ಮತ್ತು ಭಾಷೆಗೆ ಸಂಬಂಧಿಸಿದ ನಿರೀಕ್ಷೆಗಳ ಕುರಿತಾದ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಲ್ಲದೇ ರಶ್ಮಿಕಾ ಮಂದಣ್ಣ ತಮಿಳು ನಟಿ ಎಂದು ಜಾವೇದ್ ಅಖ್ತರ್ ಬರೆದಿರುವುದನ್ನು ನೆಟ್ಟಿಗರು ಗಮನಿಸಿದ್ದು, ಅವರು ತಮಿಳು ನಟಿ ಅಲ್ಲ, ಕನ್ನಡದ ನಟಿ ಎಂದು ತಿದ್ದಿ ತೀಡಿದ್ದಾರೆ.
ಅಂದಹಾಗೆ, ಇತ್ತೀಚೆಗೆ 'ಕಾಫಿ ವಿತ್ ಕರಣ್' (Koffee With Karan) ಸೀಸನ್ 9 ರಲ್ಲಿ, ತಮ್ಮ ಪತಿ ಹಾಗೂ ನಟ ವಿಜಯ್ ದೇವರಕೊಂಡ ಅವರೊಂದಿಗೆ ಕಾಣಿಸಿಕೊಂಡಾಗ ರಶ್ಮಿಕಾ ಈ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದರು. "ನನಗೆ ಇದರಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ನನ್ನಲ್ಲಿ 'ದಕ್ಷಿಣ ಭಾರತೀಯ ಉಚ್ಚಾರಣೆ' (South Indian accent) ಇದೆ. ನಾನು ಬಂದಿರುವುದೇ ದಕ್ಷಿಣ ಭಾರತದಿಂದ! ಹಾಗಾಗಿ, ನನ್ನ ಮಾತಿನಲ್ಲಿ ಆ ಉಚ್ಚಾರಣೆ ಇರುವುದು ಸಹಜ. ಇಲ್ಲದಿದ್ದರೆ ಅದು ಅಸಹಜವಾಗುತ್ತದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಅವರ ಹಿಂದಿ ಸಂಭಾಷಣಾ ಶೈಲಿಯು ಪದೇ ಪದೇ ಚರ್ಚೆಗೆ ಗ್ರಾಸವಾಗಿದೆ. 'ಅನಿಮಲ್', 'ಛಾವಾ', 'ಸಿಕಂದರ್', 'ತಮ್ಮಾ' ಮತ್ತು 'ಕಾಕ್‌ಟೇಲ್ 2' ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯದ ಕುರಿತು ಈ ಚರ್ಚೆಗಳು ಮುಂದುವರಿದಿವೆ. ವಿವಿಧ ಭಾಷೆಗಳ ಸಿನಿಮಾಗಳಿಗೆ ತಾವೇ ಧ್ವನಿ ನೀಡುವುದರ (dubbing) ಹಿಂದಿರುವ ಶ್ರಮದ ಬಗ್ಗೆಯೂ ರಶ್ಮಿಕಾ ಮಾತನಾಡಿದರು. ತಾವು ನಿರ್ದೇಶಕರಿಗೆ ಬೇರೆ ಡಬ್ಬಿಂಗ್ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ನೀಡಿದ್ದಾಗಿ, ಆದರೆ ನಿರ್ದೇಶಕರು ತಮ್ಮ ಧ್ವನಿಯನ್ನೇ ಬಳಸಲು ಆದ್ಯತೆ ನೀಡಿದ್ದಾಗಿ ಅವರು ತಿಳಿಸಿದರು.
ವಿವಿಧ ಭಾಷೆಗಳಲ್ಲಿ ತಾವೇ ಸ್ವತಃ ಡಬ್ಬಿಂಗ್ ಮಾಡುವುದು ಒಂದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದ ಅವರು, ಇದಕ್ಕಾಗಿ ಸಾಕಷ್ಟು ಶ್ರಮ ಬೇಕಾಗುತ್ತದೆ ಎಂಬುದನ್ನೂ ಒಪ್ಪಿಕೊಂಡಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ ತಮ್ಮ ನಟನೆ, ಭಾಷೆ ಮತ್ತು ಉಚ್ಚಾರಣೆಯ ಬಗ್ಗೆ ಟೀಕೆಗಳು ಬಂದಿವೆ. ಇಂತಹ ಪ್ರತಿಕ್ರಿಯೆಗಳು ತಮ್ಮ ಆಯ್ಕೆಗಳ ಮೇಲೆ ಯಾವುದೇ ನಿರ್ಬಂಧ ಹೇರುವುದನ್ನು ತಾನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.