ಬೆಳ್ಳಿ ಪರದೆಗೆ ಭೋಪಾಲ್

ಬೆಳ್ಳಿ ಪರದೆಗೆ ಭೋಪಾಲ್, ಭೋಪಾಲ್ ಅನಿಲ ದುರಂತ, ವಿಶ್ವದ ಅತಿದೊಡ್ಡ ಕರಾಳ ದಿನ
ಭೋಪಾಲ್: ಎ ಪ್ರೇಯರ್ ಫಾರ್ ರೈನ್‌
ಭೋಪಾಲ್: ಎ ಪ್ರೇಯರ್ ಫಾರ್ ರೈನ್‌

ಭೋಪಾಲ್ ಅನಿಲ ದುರಂತ...ವಿಶ್ವದ ಅತಿದೊಡ್ಡ ಕರಾಳ ದಿನ. 1984ರ ಡಿ.2 ರಾತ್ರಿ ನಡೆದ ಈ ಘಟನೆ 10 ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡಿತು. ಇದಾಗಿ 30 ವರ್ಷವಾದರೂ ಇಂದಿಗೂ ಈ ಹೆಸರು ಕೇಳಿದರೆ ಸಾಕು, ಇಡೀ ಭಾರತ ಬೆಚ್ಚುತ್ತದೆ. ಮಧ್ಯಪ್ರದೇಶದ ಜನತೆಯಂತೂ ತಮ್ಮ ಕೆಳಗಿನ ನೆಲವೇ ಬಿರಿದಂತೆ ಕಂಪಿಸುತ್ತಾರೆ. ಅಷ್ಟು ಭಯಾನಕ ಛಾಯೆಯನ್ನುಳಿಸಿದೆ ಈ ದುರಂತ. ಇದೇ ವಿಷಯವೀಗ ಹಾಲಿವುಡ್ ಕಥಾವಸ್ತು. ಅದರ  ಹೆಸರು 'ಭೋಪಾಲ್: ಎ ಪ್ರೇಯರ್ ಫಾರ್ ರೈನ್‌'. ಈಗಾಗಲೇ ಈ ಚಿತ್ರ ನ.5ರಂದು ಯುನೈಟೆಡ್ ಕಿಂಗ್ ಡಮ್‌ನಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಈ ಚಿತ್ರ ಡಿ.5ರಂದು ತೆರೆಗೆ ಬರಲಿದೆ.

ಕಥಾ ಹಂದರ

ಒಂದೇ ರಾತ್ರಿಯಲ್ಲಿ ಸುಮಾರು 10 ಸಾವಿರ ಜನರನ್ನು ಬಲಿತೆಗೆದುಕೊಂಡ ಆ ಘಮಘೋರ ದುರಂತ, ಘಟನೆ ನಡೆದು ಹಲವಾರು ವರ್ಷಗಳವರೆಗೂ ಅಲ್ಲಿನ ಜನರು ಅನುಭವಿಸಿದ ನರಕ ಯಾತನೆ, ತನ್ನಿಂದಲೇ ಅಚಾತುರ್ಯ ಸಂಭವಿಸಿದ್ದರೂ ಇದರ ನೈತಿಕ ಹೊಣೆ ಹೊರದೇ ಅಮಾನವೀಯತೆ ಪ್ರದರ್ಶಿಸಿದ ಯೂನಿಯನ್ ಕಾರ್ಬೈಡ್ ಕಂಪನಿ, ಅದ್ಕೆ ಕುಮ್ಮಕ್ಕು ನೀಡಿದ ಅಂದಿನ ರಾಜಕಾರಣಿಗಳು, ಪರಿಹಾರಕ್ಕಾಗಿ ದಶಕಗಳ ಕಾಲ ಹೋರಾಡಿ ಬಸವಳಿದ ಸಂತ್ರಸ್ತರು...ಇವೆಲ್ಲಾ ವಿಚಾರಗಳನ್ನಿಟ್ಟುಕೊಂಡು ಚಿತ್ರಕತೆಯನ್ನು ಹೆಣೆಯಲಾಗಿದೆ,

ಕಥೆ ಸಾಗುವ ರೀತಿ
ಭೋಪಾಲ್‌ನಲ್ಲಿ ರಿಕ್ಷಾ ಓಡಿಸುವ ದಿಲಿಪ್ ಎಂಬ ಪಾತ್ರದ ಸುತ್ತಲೂ ಕಥೆ ತಿರುಗುತ್ತದೆ. ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ  ಬಡವ ದಿಲೀಪ್ ಸಂಪಾದನೆ ಸಾಕಾಗದೇ, ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಕೆಲಸಗಾರನಾಗಿ ಸೇರಿಕೊಳ್ಳುತ್ತಾನೆ. ಆದರೆ, ಆ ಕೆಲಸ ಆತನಿಗೆ ಬಹುಬೇಗ ಕಿರಿಕಿರಿ ತರಿಸುತ್ತದೆ. ಹೆಚ್ಚು ಹೊತ್ತು ಕೆಲಸ ಹಾಗೂ ಅಪಾಯಕಾರಿ ಸನ್ನಿವೇಶಗಳಲ್ಲಿ ಕೆಲಸ ಮಾಡುವುದು ಆತನಲ್ಲಿ ಅಸಹನೆ ಹುಟ್ಟಿಸುತ್ತವೆ. ಕಾರ್ಮಿಕರ ಕಾಳಜಿಗಾಗಿ ಕಾರ್ಖಾನೆಯ ಆಡಳಿತ ಮಂಡಳಿ ಯಾವುದೇ ಮುನ್ನೆಚ್ಚರಿಕೆ ಅನುಸರಿಸದೇ ಇರುವುದೂ ಆತನ ಗಮನಕ್ಕೆ ಬರುತ್ತದೆ. ಇದನ್ನು ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುವುದಿಲ್ಲ. ಹೀಗಾಗಿ, ಕೆಲಸ ಬಿಡಲು ಅನೇಕ ಬಾರಿ ನಿರ್ಧರಿಸುತ್ತಾನಾದರೂ, ಸಂಬಳದ ಮುಖ ನೋಡಿಕೊಂಡು ಸುಮ್ಮನಾಗುತ್ತಾನೆ. ಹೀಗಿರುವಾಗ ಆ ಕರಾಳ ದಿನ ಅಂದೊಂದು ದಿನ ಬಂದು ಅಪ್ಪಳಿಸುತ್ತದೆ. ಒಂದು ರಾತ್ರಿ ಕಾರ್ಖಾನೆಯಲ್ಲಿದ್ದ ಮಿಥೈನ್ ಐಸೋಸೈನೇಟ್ ಸೋರಿಕೆಯಾಗಿ ಸುತ್ತಲಿನ ಪ್ರದೇಶದಲ್ಲೆಲ್ಲಾ ಹರಡಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗುತ್ತದೆ.

ಬಿಡುಗಡೆಗೂ ಮುನ್ನವೇ ವಿವಾದ

ನೈಜ ಘಟನೆಗಳನ್ನಾಧರಿಸಿದ ಚಿತ್ರಗಳು ವಿವಾದಕ್ಕೊಳಗಾಗುವುದು ಸಹಜ. ಹಾಗೆಯೇ, ಈ ಚಿತ್ರವೂ ಬಿಡುಗಡೆಗೆ ಮುನ್ನವೇ ಕೆಲವರ ಕಣ್ಣು ಕೆಂಪಾಗಿಸಿದೆ. ಚಿತ್ರದಲ್ಲಿ ವಾರೆನ್ ಆ್ಯಂಡರ್ಸನ್ ಕಾರ್ಖಾನೆಯ ಪರವಾಗಿ ಕೈಗೊಂಡ ಕೆಲವೊಂದು ನಿರ್ಧಾರಗಳನ್ನು ಸಮರ್ಥಿಸಲಾಗಿದೆ. ಅಲ್ಲದೇ, ಕೆಲವು ವಿಚಾರಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಚಿತ್ರಿಸಲಾಗಿದೆ ಎಂದು ಭೋಪಾಲ್ 'ಗ್ರೂಪ್ ಫಾರ್ ಇನ್ಫಾರ್ಮೇಷನ್  ಆ್ಯಂಡ್ ಆ್ಯಕ್ಷನ್‌' ನ ರಚನಾ ಧಿಂಗ್ರಾ ಅಸಮಾಧಾನ ಸೂಚಿಸಿದ್ದಾರೆ. ಇದೇ ವಿಚಾರವಾಗಿ ತಮ್ಮ ಸಂಘಟನೆಯ ಸದಸ್ಯರು ಶೀಘ್ರವೇ ಚಿತ್ರ  ತಂಡವನ್ನು ಭೇಟಿಯಾಗಿ, ಕೆಲವಾರು ಮಾರ್ಪಾಟು ಮಾಡುವಂತೆ ಸೂಚಿಸಲು ನಿರ್ಧರಿಸಿದ್ದಾರೆ.

ಚಿತ್ರ ತಂಡ ಹೇಳೋದೇನು?


ಈ ಟೀಕೆಗಳಿಗೆ ಸ್ಪಂದಿಸಿರುವ ಚಿತ್ರ ತಂಡ, ಆ್ಯಂಡರ್ಸನ್ ಬಗ್ಗೆ ಯಾವುದೇ ಸಹಾನುಭೂತಿಯನ್ನು ತಾವು ಹೊಂದಿಲ್ಲ  ಎಂದಿದೆ. ಆ್ಯಂಡರ್ಸನ್ ಪಾತ್ರಧಾರಿ ಮಾರ್ಟಿನ್ ಶೀನ್, 'ಚಿತ್ರದಲ್ಲಿ  ದುರ್ಘಟನೆಯ ಘೋರ ಪರಿಣಾಮಗಳನ್ನು ತೇರಿಸಲಾಗಿದೆ. ಆ್ಯಂಡರ್ಸನ್ ಪರವಾಗಿ ಚಿತ್ರ ಮೂಡಿ ಬಂದಿಲ್ಲ ' ಎಂಬ ಸ್ಪಷ್ಟನೆಯನ್ನೇನೋ ನೀಡಿದ್ದಾರೆ. ಆದರೆ ನಿಜ ಬಯಲಾಗುವುದು ಚಿತ್ರ ಬಿಡುಗಡೆ ಕಂಡ ಮೇಲೆಯೇ.


ಕಲಾವಿದರ್ಯಾರು?

ಕಥೆಯ ಕೇಂದ್ರ ಪಾತ್ರ ದಿಲೀಪ್ ಆಗಿ ಬಾಲಿವುಡ್‌ನ ಖ್ಯಾತ ಸಹ ನಟ ರಾಜ್‌ಪಾಲ್ ಯಾದವ್ ಕಾಣಿಸಿಕೊಂಡಿದ್ದಾರೆ. ಭೋಪಾಲ್ ಅನಿಲ ದುರಂತ ಪ್ರಕರಣದಲ್ಲಿ ಭಾರತೀಯರ ಪಾಲಿಗೆ ವಿಲನ್ ಆದ ಯೂನಿಯನ್ ಕಾರ್ಬೈಡ್‌ನ ಮುಖ್ಯಸ್ಥ ವಾರೆನ್ ಆ್ಯಂಡರ್ಸನ್ ಅವರ ಪಾತ್ರ ಚಿತ್ರದ ಪ್ರಮುಖ ಆಧಾರ ಸ್ತಂಭಗಳಲ್ಲೊಂದು.  ಹಾಲಿವುಡ್ ನಟ ಮಾರ್ಟಿನ್ ಶೀನ್ ಈ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಂತ್ರಸ್ತರಿಗೆ ನೆರವಾಗುವ ಪತ್ರಕರ್ತೆಯೊಬ್ಬಳ ಪಾತ್ರ ಬರುತ್ತದೆ. ಆ ಪಾತ್ರವನ್ನು ಲಂಡನ್‌ನ ಮಿಚಾ ಅನ್ನೆ ಬಾರ್ಟನ್ ನಿಭಾಯಿಸಿದ್ದಾರೆ. ಇನ್ನುಳಿದಂತೆ, ಕಾಲ್ ಪೆನ್ನ್, ತನಿಶ್ತಾ ಚಟರ್ಜಿ  ಇನ್ನಿತರ ಪಾತ್ರಗಳಲ್ಲಿದ್ದಾರೆ. ಚಿತ್ರಕತೆಯನ್ನು ರವಿ ಕುಮಾರ್, ಡೇವಿಡ್ ಬ್ರೂಕ್ಸ್ ಬರೆದಿದ್ದಾರೆ. ರವಿ ವಾಲಿಯಾ ಅವರ ನಿರ್ಮಾಣವಿದ್ದು, ರವಿ ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

-ಚೇತನ್ ಓ. ಆರ್


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com