
ವ್ಯಕ್ತಿಚಿತ್ರ ತೆಗೆದ್ರೆ ತೋಪೆದ್ದು ಹೋಗಲ್ಲ! ಇದು ಬಾಲಿವುಡ್ 2014ರಲ್ಲಿ ಕಂಡುಕೊಂಡ ಸತ್ಯ.
ಪ್ರಿಯಾಂಕಾ ಛೋಪ್ರಾಳ 'ಮೇರಿ ಕೋಂ' ಫರ್ಹಾನ್ ಅಕ್ತರ್ ನಟಿಸಿದ 'ಭಾಗ್ ಮಿಲ್ಕಾ ಭಾಗ್' ಇರ್ಫಾನ್ ಖಾನ್‌ನ 'ಪಾನ್‌ಸಿಂಗ್ ತೋಮರ್' ವಿದ್ಯಾಬಾಲನ್‌ಳ 'ದಿ ಡರ್ಟಿ ಪಿಕ್ಚರ್' ಯಶಸ್ಸಿನಿಂದಾಗಿ ಬಾಲಿವುಡ್‌ನ ನಿರ್ದೇಶಕರು ಇದೀಗ ನಿಜಜೀವನ ಸಾಧಕರ ಹುಡುಕಾಟದಲ್ಲಿ ತೊಡಗುವಂತಾಗಿದೆ. ಬಯೋಪಿಕ್‌ಗಳು ಸದ್ಯದ ಸಕ್ಸಸ್ ಫಾರ್ಮುಲಾಗಳು.
ಸಿಲ್ಕ್ ಸ್ಮಿತಾಳ ದುಃಖದಾಯಕ ಜೀವನ ತೆರೆದಿಟ್ಟ ವಿದ್ಯಾಬಾಲನ್ ಇದೀಗ ಕರ್ನಾಟಿಕ್ ಸಂಗೀತದ ಗಾನ ಸರಸ್ವತಿ, ಭಾರತರತ್ನ ಪಡೆದ ಎಂ.ಎಸ್ ಸುಬ್ಬಲಕ್ಷ್ಮಿಯಾಗಿ ಆಕೆಯ ಯಶೋಗಾಥೆ ಹೇಳಲು ತಯಾರಾಗುತ್ತಿದ್ದಾಳೆ. ತಮಿಳು ಚಿತ್ರ ನಿರ್ಮಾಪಕ ರಾಜೀವ್ ಮೆನನ್ ಈ ಚಿತ್ರದ ಹಕ್ಕನ್ನು ಕಾಯ್ದುಕೊಂಡಿದ್ದಾರೆ.
ಮಾನವ ಹಕ್ಕುಗಳ ಕಾರ್ಯಕರ್ತ ಶಾಹಿದ್ ಅಜ್ಮಿಯ ಕುರಿತು ಚಿತ್ರ ಮಾಡಿ ಬೆನ್ನು ತಟ್ಟಿಸಿಕೊಂಡ ಬುದ್ದಿವಂತ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ಸದ್ಯ ನಾಸಾ ಜೊತೆ ಕೆಲಸ ಮಾಡಿದ ಗಣಿತಜ್ಞ ವಶಿಷ್ಠ ನಾರಾಯಣ ಸಿಂಗ್ ಬದುಕಿನ ಮೇಲೆ ಕಣ್ಣು ಹಾಕಿದ್ದಾರೆ. ಎಲೆಮರೆಯ ಕಾಯಿಯಂತೆ ಹೆಚ್ಚು ಪಾಪುಲರ್ ಅಲ್ಲದ ಫೀಲ್ಡ್‌ಗಳಲ್ಲೂ ಕಾರ್ಯ ನಿರ್ವಹಿಸಿದ ಸಾಧಕರತ್ತ ನಿರ್ಮಾಪಕರ ಗಮನ ಹರಿಯುತ್ತಿರುವುದು ಸಂತಸದ ವಿಷಯ.
ಇನ್ನು ಹಾಕಿಯ ದಂತಕತೆ, 3 ಬಾರಿ ಒಲಿಂಪಿಕ್‌ನಲ್ಲಿ ಚಿತ್ರ ಗೆದ್ದ ಧ್ಯಾನ್ ಚಂದ್ ಕುರಿತ ಸಿನಿಮಾ ನಿರ್ಮಾಣ ಹಕ್ಕನ್ನು ಕರಣ್ ಜೋಹರ್ ಆಗಲೇ ಪಡೆದಾಗಿದೆ. ಧ್ಯಾನ್‌ಚಂದ್ ಪಾತ್ರಧಾರಿ ಯಾರೆಂದು ಇನ್ನೂ ಕೊನೆಯ ನಿರ್ಧಾರಕ್ಕೆ ಬಂದಿಲ್ಲವಾದರೂ ಶಾರುಖ್ ಖಾನ್ ಹೆಸರು ಕೇಳಿಬರುತ್ತಿದೆ. ಇದೇ ಗ್ಯಾಪಲ್ಲಿ ನಟ ರಣಬೀರ್ ಕಪೂರ್ ಅನುರಾಗ್ ಬಸು ನಿರ್ದೇಶನದಲ್ಲಿ ಬಾಲಿವುಡ್‌ನ ಖ್ಯಾತ ಗಾಯ, ನಟ ಕಿಶೋರ್ ಕುಮಾರ್ ಆಗಲು ಸಿದ್ಧತೆಯಲ್ಲಿ ತೊಡಗಿದ್ದಾನೆ. ಕಿಶೋರ್ ಕುಮಾರ್ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೇ. ಆದರೆ ನನ್ನ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುವ ದೊಡ್ಡ ಹೊಣೆ ಹೆಗಲಿಗೇರಿದೆ ಎಂದಿದ್ದಾನೆ ರಣಬೀರ್.
ಇನ್ನು 2015ರಲ್ಲಿ ಸದ್ದು ಮಾಡಬಹುದಾದ ಮತ್ತೊಂದು ಬಯೋಪಿಕ್ ಎಂದರೆ ಸೂಪರ್ ಸ್ಟಾರ್ ಸಂಜಯ್‌ದತ್‌ರದ್ದು. ಪಿಕೆ ನಿರ್ದೇಶಕ ರಾಜಕುಮಾರ್ ಹಿರಾನಿಯ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿರುವುದು ಇನ್ನಷ್ಟು ಕುತೂಹಲ ಹುಟ್ಟಿಸಿದೆ.
ಸಂಜು ಬಾಬಾನ ಜೀವನ ರೋಲರ್‌ಕೋಸ್ಟರ್ ತರ. ನಂಬಲಸಾಧ್ಯ ತಿರುವುಗಳು ಅಲ್ಲಿವೆ. ನಾನು ಆತನನ್ನು ಹೊಗಳಲ್ಲಿ ಈ ಚಿತ್ರ ಮಾಡುತ್ತಿಲ್ಲ. ಆತನ ಎಲ್ಲ ಲೋಪದೋಷ, ಸೋಲುಗಳೂ ಚಿತ್ರದಲ್ಲಿರಲಿವೆ ಎನ್ನುತ್ತಾರೆ ಹಿರಾನಿ. ಇದರಲ್ಲೂ ರಣಬೀರ್ ಕಪೂರ್ ಸಂಜಯ್ ಪಾತ್ರ ನಿರ್ವಹಿಸಲಿದ್ದಾನೆ .
ಇವೆಲ್ಲದರ ನಡುವೆ ಸದ್ಯದ ಆಸಕ್ತಿಕರ ವಿಷಯ ಏನಪ್ಪಾ ಎಂದರೆ ಚಿತ್ರ ನಿರ್ಮಾಪಕ ನೀರಜ್ ಪಾಂಡೆ ಕ್ರಿಕೆಟ್‌ನ ಉತ್ತಮ ನಾಯಕನೆನಿಸಿಕೊಂಡ ಧೋನಿಯ ಕುರಿತು ಚಿತ್ರ ತೆಗೆಯಲು ಹೊರಟಿರುವುದು. ನಟ ಸುಶಾಂತ್ ಸಿಂಗ್ ರಜಪೂತ್ ಈ ಚಿತ್ರದಲ್ಲಿ ಧೋನಿಯಾಗಿ ಕಣಕ್ಕಿಳಿಯುತ್ತಿದ್ದಾನೆ. ಲಗಾನ್ ನಂತರ ಕ್ರಿಕೆಟ್ ಪ್ರೇಮಿಗಳು ನಿರೀಕ್ಷೆ ಇಟ್ಟು ಕಾಯಲೊಂದು ಕಾರಣ ಸಿಕ್ಕಿದಂತಾಗಿದೆ.
Advertisement