
ನಟ ಪುನೀತ್ ರಾಜ್‌ಕುಮಾರ್ ಅವರ ಸಿಂಗ್ ಎ ಸಾಂಗ್ ಎನ್ನುವ ಸೂತ್ರ ಮುಂದುವರೆದಿದೆ. ಕನ್ನಡ ಚಿತ್ರರಂಗದಲ್ಲಿ ನಾಯಕ ಕಂ ಗಾಯಕ ಎನ್ನುವ ಹೆಗ್ಗಳಿಕೆಯ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಪುನೀತ್ ರಾಜ್ ಕುಮಾರ್, ಈಗ ಗುರುದೇಶಪಾಂಡೆ ನಿರ್ದೇಶನದ 'ರುದ್ರತಾಂಡವ' ಚಿತ್ರಕ್ಕಾಗಿ ಒಂದು ವಿಶೇಷವಾದ ಹಾಡನ್ನು ಹಾಡಿದ್ದಾರೆ.
ಚಿರಂಜೀವಿ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ಜೋಡಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದ ಹಾಡೊಂದಕ್ಕೆ ಪುನೀತ್ ಧ್ವನಿ ಬೇಕಿತ್ತು. ಅಲ್ಲದೆ ಗುರುದೇಶಪಾಂಡೆ ಅವರು ಪುನೀತ್ ಅವರಿಂದ ಹಾಡಿಸಿದ್ದಾರೆ. ಇತ್ತೀಚೆಗೆ ಅಶ್ವಿನಿ ಸ್ಟುಡಿಯೋದಲ್ಲಿ ಪುನೀತ್, 'ಒಂದೂರಲ್ಲಿ ಒಬ್ಬ ಹುಡುಗ ಇದ್ದ, ಅವನು ಮಿಡ್ಲ್ ಸ್ಕೂಲ್ ಮೇಡಮ್ ಹಿಂದೆ ಬಿದ್ದ...' ಎಂದು ಸಾಗುವ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ನಟ ಮದರಂಗಿ ಕೃಷ್ಣ ಹಾಗೂ ಚಿಕ್ಕಣ್ಣ ಕಾಣಿಸಿಕೊಂಡು ಚಿರಂಜೀವಿ ಸರ್ಜಾರನ್ನು ರೇಗಿಸುವ ಹಾಡು ಇದಾಗಿದೆ. ಇನ್ನು ಚಿತ್ರದ ಮುಖ್ಯ ಪಾತ್ರದಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಖಳನಾಯಕ ರವಿಶಂಕರ್ 'ಖದರ್ ಪುಲ್' ಆಗಿ ಸೌಂಡು ಮಾಡಿದ್ದಾರೆ. ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ 'ರುದ್ರ ತಾಂಡವ' ಚಿತ್ರಕ್ಕೆ ಈಗ ಪುನೀತ್ ರಾಜ್‌ಕುಮಾರ್ ಹಾಡಿರುವುದು ಆನೆ ಬಲ ಬಂದಂತಾಗಿದೆ ಎಂಬುದು ನಿರ್ದೇಶಕರ ವಿಶ್ವಾಸ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಎಲ್ಲ ಹಾಡುಗಳು ಮೂಡಿಬಂದಿವೆ.
ಅಂದಹಾಗೆ ನಟ ಪುನೀತ್ ಅವರ ಧ್ವನಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಅವರ ಕಂಠದಲ್ಲಿ ಮೂಡಿರುವ ಹಾಡುಗಳು ಕೂಡ ಹಿಟ್ ಲಿಸ್ಟ್‌ಗೆ ಸೇರುತ್ತಿದೆ. ಹೀಗಾಗಿ ಅಪ್ಪು ವಾಯ್ಸ್ ಅನ್ನು ಎಲ್ಲ ನಿರ್ದೇಶಕರು ಅಪ್ಪಿಕೊಳ್ಳುತ್ತಿದ್ದಾರಂತೆ. ನಮ್ಮ ಚಿತ್ರಕ್ಕೆ ಈ ಹಾಡು ತುಂಬಾ ಮುಖ್ಯ. ಹೀಗಾಗಿ ಸ್ಟಾರ್ ನಟನಿಂದ ಹಾಡಿಸಿದರೆ ಚಿನ್ನಾಗಿರುತ್ತದೆಂಬ ಕಾರಣಕ್ಕೆ ನಟ ಪುನೀತ್ ರಾಜ್‌ಕುಮಾರ್ ಅವರಿಂದ ಹಾಡಿಸಿದ್ದೇನೆ ಎನ್ನುತ್ತಾರೆ ಗುರುದೇಶಪಾಂಡೆ. ಇನ್ನೂ ಚಿತ್ರದ ಆಡಿಯೋ ಬಿಡುಗಡೆ ಸದ್ಯದಲ್ಲೇ ನಡೆಯಲಿದೆ.
Advertisement