'ಅನಂತ'ನ + (ಪ್ಲಸ್) ಅವತಾರ

ದ್ವಾವ್ರೇ ಬಳಿಕ ಗಡ್ಡವಿಜಿಯ ಹೊಸ ಪ್ರಯತ್ನ, ವಿಭಿನ್ನ ಪಾತ್ರದಲ್ಲಿ ಅನಂತ್‌ನಾಗ್
ಪ್ಲಸ್ ಚಿತ್ರದ ಕೇಂದ್ರ ಬಿಂದು ಅನಂತನಾಗ್
ಪ್ಲಸ್ ಚಿತ್ರದ ಕೇಂದ್ರ ಬಿಂದು ಅನಂತನಾಗ್

ಬೆಂಗಳೂರು: ವಯಸ್ಸು 66. ಆದರೂ ಆ ಜೀವ ವಿನೂತನ ಪಾತ್ರಕ್ಕಾಗಿ ಹಾತೊರೆಯುತ್ತಲೇ ಇದೆ. ಇದು ಬೇರಾರು ಅಲ್ಲ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಅವಾಂತರ ಮಾಡಿಕೊಂಡೇ ಖ್ಯಾತಿಯ ಉತ್ತುಂಗಕ್ಕೇರಿದ ಅನಂತ್‌ನಾಗ್.

ವರ್ಷವಿಡೀ ಸಿನಿಮಾಗಳಲ್ಲಿ ಬಿಡುವಿಲ್ಲದೇ ದುಡಿದರೂ, ಅನಂತ್ ನಾಗ್ ಅವರಿಗೆ ಮತ್ತೇನೋ ಕಳೆದುಕೊಂಡ ಅನುಭವವಂತೆ. ಇದಕ್ಕೆ ಕಾರಣ, ನಿತ್ಯ ನೂತನ ಪಾತ್ರಕ್ಕಾಗಿ ಹಾತೊರೆಯುವ ಅವರ ಮನಸ್ಸು. ಪ್ರತೀ ಬಾರಿ ಹೊಸ ಚಿತ್ರಗಳಿಗೆ ಸಹಿ ಹಾಕುವಾಗಲೂ ಅನಂತ್ ಅವರ ಮನಸಿನಲ್ಲಿ ಮೂಡುವ ಪ್ರಶ್ನೆ ಎಂದರೆ ಈ ಚಿತ್ರದಲ್ಲಿ ಏನಾದರೂ ವಿಭಿನ್ನ ಪಾತ್ರ ದೊರೆಯುವುದೇ ಎಂದು.

ಹೀಗಾಗಿಯೇ ಭಾರತೀಯ ಚಿತ್ರರಂಗದ ಕೆಲ ಹಿರಿಯ ಮಂದಿ ಕನ್ನಡ ಚಿತ್ರರಂಗ ಅನಂತ್‌ನಾಗ್ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿರಬಹುದು. ಆದರೆ ಇದನ್ನು ನಾನು ತೊಡೆದು ಹಾಕುತ್ತೇನೆ ಎನ್ನುವ ಧಾಟಿಯಲ್ಲಿ ದ್ಯಾವ್ರೇ ಖ್ಯಾತಿಯ ಗಡ್ಡ ವಿಜಿ ಮುಂದೆ ಬಂದಿದ್ದು, ಅನಂತ್ ನಾಗ್ ಅವರನ್ನೇ ಕೇಂದ್ರವಾಗಿಟ್ಟುಕೊಂಡು ಚಿತ್ರಕತೆಯನ್ನು ರಚಿಸಿದ್ದಾರೆ.

ಪ್ರಸ್ತುತ ದ್ಯಾವ್ರೇ ಖ್ಯಾತಿಯ ಗಡ್ಡ ವಿಜಿ ಅವರ ಪ್ಲಸ್ ಎಂಬ ಚಿತ್ರಕ್ಕೆ ಅನಂತ್ ಸಹಿಹಾಕಿದ್ದು, ಈಗಾಗಲೇ ಚಿತ್ರದ ಕೆಲ ಪೋಸ್ಟರ್‌ಗಳು ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚು ಮಾಡಿದೆ. ತಮ್ಮ ಮೊದಲ ಚಿತ್ರ ದ್ಯಾವ್ರೇ ದಲ್ಲಿ ಖೈದಿಗಳ ಮನದಾಳವನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿ ವಿಮರ್ಶಕರ ಮನ ಗೆದಿದ್ದ ಗಡ್ಡ ವಿಜಿ, ಪ್ಲಸ್ ಸಿನಿಮಾದಲ್ಲಿಯೂ ಅಂತಹುದೇ ವಿಭಿನ್ನ ಎಲಿಮೆಂಟ್ ಇಟ್ಟಿರುವ ಸಾಧ್ಯತೆ ಇದೆ.

ಈ ಬಗ್ಗೆ ಸ್ವತ ಗಡ್ಡ ವಿಜಿ ಅವರೇ ಮಾತನಾಡಿದ್ದು, 'ವಿಭಿನ್ನ ವೇಷ ಭೂಷಣ ಮತ್ತು ವಿಭಿನ್ನ ಪಾತ್ರಗಳು ಅನಂತ್ ನಾಗ್ ಅವರಿಗೆ ಹೊಸದೇನೂ ಅಲ್ಲ. ಅವರ ಅನುಭವದಲ್ಲಿ ಅವರು ಇಂತಹ ಸಾಕಷ್ಟು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅವರ ಅನುಭವ ಮತ್ತು ಪ್ರಭಾವಶಾಲಿ ವ್ಯಕ್ತಿತ್ವ ಯಾವುದೇ ನಿರ್ದೇಶಕನಲ್ಲಿ ಆಸಕ್ತಿ ಮೂಡಿಸುತ್ತದೆ. ಅವರೇ ನನ್ನ ಕಥೆಯ ನಾಯಕನಾಗಿದ್ದು, ಅವರ ಸುತ್ತಲೇ ನನ್ನ ಚಿತ್ರಕಥೆ ತಿರುಗುತ್ತದೆ. ಫ್ಲಸ್ ಚಿತ್ರದ ಆ ಪಾತ್ರಕ್ಕೆ ಅವರನ್ನು ಬಿಟ್ಟರೆ ಬೇರಾರು ಕೂಡ ಸೂಕ್ತವಲ್ಲ ಎಂದು ನನಗನ್ನಿಸುತ್ತದೆ'.

'ಇನ್ನು ಚಿತ್ರಕಥೆ ಕುರಿತು ಹೇಳುವುದಾದರೆ ಅನಂತ್‌ನಾಗ್ ಅವರು ಚಿತ್ರದಲ್ಲಿ ದೊಡ್ಡ ಉದ್ಯಮಿಯ ಪಾತ್ರವನ್ನು ನಿಭಾಯಿಸುತ್ತಿದ್ದು, ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಒಂದು ಅವರ ಬಾಲ್ಯದ ಕುರಿತಾಗಿದ್ದರೆ, ಮತ್ತೊಂದು ಅವರ 50ರ ಆಸುಪಾಸಿನ ಹಿರಿಯನ ಪಾತ್ರವಾಗಿದೆ. 3ನೇಯದು ಸರ್ಪೈಸ್ ಆಗಿದ್ದು, ಇದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು. ಇನ್ನು ಅನಂತ್‌ನಾಗ್‌ರಂತಹ ಅನುಭವಿ ನಟರನ್ನು ನಿರ್ದೇಶಿಸುವುದು ನಿಜಕ್ಕೂ ಒಂದು ಸವಾಲಿನ ಕಾರ್ಯವಾಗಿದ್ದು, ಇದಕ್ಕಾಗಿ ನಮ್ಮ ಚಿತ್ರದ ನಿರ್ಮಾಪಕ ರಿತೇಶ್ ಮತ್ತು ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ನನ್ನ ಮತ್ತೋರ್ವ ಸ್ನೇಹಿತ ಕುಳಿತುಕೊಂಡು ಚಿತ್ರಕಥೆ ಕುರಿತಂತೆ ಚರ್ಚಿಸಿದೆವು. ಬಳಿಕವಷ್ಟೇ ಅನಂತ್‌ನಾಗ್ ಅವರಿಗೆ ಕಥೆಯನ್ನು ಹೇಳಲಾಯಿತು'.

'ಅದೃಷ್ಟಕ್ಕೆ ಅನಂತ್ ನಾಗ್ ಕೂಡ ಕೂಡಲೇ ಕಥೆಯನ್ನು ಮೆಚ್ಚಿ ಅಭಿನಯಿಸಲು ಒಪ್ಪಿಕೊಂಡರು. ಚಿತ್ರದಲ್ಲಿ ಕೆಲ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಇದ್ದು, ಹಾಡುಗಳು ಮತ್ತು ಸಾಹಸ ದೃಶ್ಯಗಳು ಕೂಡ ಇರುತ್ತವೆ. ಒಂದು ವಿಶೇಷ ಪಾತ್ರದಲ್ಲಿ ರಾಧಿಕಾ ಪಂಡಿತ್ ಅವರು ಅಭಿನಯಿಸುತ್ತಿದ್ದು, ನಾನು ನನ್ನ ಚಿತ್ರವನ್ನು ನನ್ನದೇ ಆದ ಶೈಲಿಯಲ್ಲಿ ನಿರ್ದೇಶಿಸುತ್ತಿದ್ದೇನೆ. ಚಿತ್ರದ ನಿರ್ಮಾಪಕ ರಿತೇಶ್ ಅವರು ಕೂಡ ಸಿನಿಮಾ ತಂತ್ರಜ್ಞಾನದಲ್ಲಿ ಪಳಗಿದ್ದು, ಇದು ಚಿತ್ರಕ್ಕೆ ಸಕಾರಾತ್ಮಕವಾಗಿದೆ. ಬಾಲಿವುಡ್‌ನಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ಚಿತ್ರವನ್ನು ಶೂಟ್ ಮಾಡಲಾಗುತ್ತಿದೆ ಎಂದು ವಿಜಿ ಹೇಳಿದ್ದಾರೆ.

ಅಂತೆಯೇ ತಮ್ಮ ಮೊದಲ ಚಿತ್ರ ದ್ವಾವ್ರೇ ಗೆ ಕೇಳಿಬಂದ ಮಿಶ್ರ ಪ್ರತಿಕ್ರಿಯೆ ಕುರಿತು ಮಾತನಾಡಿದ ವಿಜಿ, ದ್ಯಾವ್ರೇ ಚಿತ್ರ ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಒಂದೇ ಚಿತ್ರದಲ್ಲಿ ನಾನು ಹತ್ತು ಚಿತ್ರಗಳನ್ನು ನಿರ್ದೇಶಿಸಿದ ಅನುಭವವನ್ನು ಪಡೆದುಕೊಂಡೆ. ಚಿತ್ರೀಕರಣದ ವೇಳೆ ನಾನು ಚಿತ್ರ ನಿರ್ಮಾಣದ ತಂತ್ರಗಳನ್ನು ಕಲಿತುಕೊಂಡೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಸದ್ದು ಮಾಡದೇ ಇರಬಹುದು. ಆದರೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ವಿಜಿ ಹೇಳಿದರು.

ಇನ್ನು ನೂತನ ಚಿತ್ರದ ಕುರಿತು ಮಾತನಾಡಿದ ಹಿರಿಯ ನಟ ಅನಂತ್‌ನಾಗ್ ಅವರು, 'ನಾವು ನಿಜಕ್ಕೂ ಹೊಸ ಆಲೋಚನೆಗಳೊಂದಿಗೆ ಮುಂದೆ ಬರುವ ಯುವಕರನ್ನು ಪ್ರೋತ್ಸಾಹಿಸಬೇಕಿದೆ' ಎಂದು ಹೇಳಿದ್ದಾರೆ. ಇತ್ತೀಚೆಗೆ ನಗರದ ಗಾಲ್ಫ್ ಕ್ಲಬ್‌ನಲ್ಲಿ ಚಿತ್ರದ ಫೋಟೋ ಶೂಟ್ ನಡೆದಿದ್ದು, ಫೋಟೋ ಶೂಟ್‌ನಲ್ಲಿ ಅನಂತ್‌ನಾಗ್ ತುಂಬಾ ಕಲರ್‌ಫುಲ್ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅನಂತ್‌ನಾಗ್ ಅವರ ಪತ್ನಿ ಗಾಯತ್ರಿ ಅವರು ಕೂಡ ಫೋಟ್ ಶೂಟ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಚಿತ್ರತಂಡಕ್ಕೆ ಹುರಿದುಂಬಿಸಿದರು.

ಒಟ್ಟಾರೆ ಕನ್ನಡದ ಎವರ್ ಗ್ರೀನ್ ನಟನನ್ನು ನಿರ್ದೇಶಿಸುವ ಮೂಲಕ ಗಡ್ಡ ವಿಜಿ ದೊಡ್ಡ ಸಾಹಸಕ್ಕೆ ಕೈಹಾಕಿದ್ದು, ಅನಂತ್‌ನಾಗ್ ಅವರನ್ನು ಕನ್ನಡ ಚಿತ್ರರಂಗ ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಅಪವಾದವನ್ನು ಗಡ್ಡ ವಿಜಿ ತಮ್ಮ ಪ್ಲಸ್ ಚಿತ್ರದ ಮೂಲಕ ತೊಡೆದು ಹಾಕುತ್ತಾರೆಯೇ...? ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com