ನಟಿ ಅಂದ್ಮೇಲೆ ಗ್ಲಾಮರಸ್ ಆಗಿರಬೇಕು ಅಂತಾರೆ ಶುಭಾ ಪೂಂಜಾ

ನಟಿ ಶುಭಾ ಪೂಂಜಾಳನ್ನು ಆರಂಭ ದಿನ...
'ಕೋಟಿಗೊಂದ್ ಲವ್ ಸ್ಟೋರಿ' ರಾಕೇಶ್, ಶುಭಾ ಪೂಂಜಾ
'ಕೋಟಿಗೊಂದ್ ಲವ್ ಸ್ಟೋರಿ' ರಾಕೇಶ್, ಶುಭಾ ಪೂಂಜಾ
Updated on

ನಟಿ ಶುಭಾ ಪೂಂಜಾಳನ್ನು ಆರಂಭ ದಿನಗಳಲ್ಲಿ ನೋಡಿದವರು ಮಗ್ಗಿನಂಥ ಹುಡುಗಿ ಎಂದು ಮೆಚ್ಚಿಕೊಂಡರು. ಅದಕ್ಕೆ ಕಾರಣ ನಿರ್ದೇಶಕ ಶಶಾಂಕ್ ಅವರ ಮೊಗ್ಗಿನ ಮನಸು ಚಿತ್ರ. ಕನ್ನಡ ಚಿತ್ರದಲ್ಲಿ ಅಭಿನಯಿಸುವುದಕ್ಕೂ ಮುನ್ನ ಮೂರು ತಮಿಳು ಸಿನಿಮಾಗಳಿಗೆ ಶುಭಾ ಬಣ್ಣ ಹಚ್ಚಿದ್ದರು. ಕನ್ನಡ, ತಮಿಳು ಸೇರಿ ಒಟ್ಟು 25 ಸಿನಿಮಾಗಳಲ್ಲಿ ನಟಿಸಿರುವ ಶುಭಾ, ಸೋಲು ಅಥವಾ ಗೆಲವಿಗಿಂತ ಬೇರೆ ರೀತಿಯಲ್ಲಿ ಸದ್ದು ಮಾಡಿದ್ದೇ ಹೆಚ್ಚು. ಸದ್ಯ ಶುಭಾ ನಟಿಸಿರುವ ಚಿತ್ರಗಳ ಆರು ಸಿನಿಮಾಗಳು ಬಿಡುಗಡೆಯ ಮೋಕ್ಷಕ್ಕಾಗಿ ಕಾಯುತ್ತಿವೆ. ಇವುಗಳಲ್ಲಿ ಯಾವುದಕ್ಕೆ ಅಂಥ ಭಾಗ್ಯ ಸಿಗುತ್ತದೋ ತಿಳಿಯದು. ಆದರೆ, ನಟಿ ಶುಭಾ ಪೂಂಜಾ ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಬಾರಿ ತಮ್ಮ ಪಾತ್ರಕ್ಕಾಗಿ ಸುದ್ದಿಯಾಗುತ್ತಿದ್ದಾರೆ. ಹೌದು ಕೋಟಿಗೊಂದು ಲವ್ ಸ್ಟೋರಿ ಚಿತ್ರದಲ್ಲಿ ಶುಭಾ ಸಾಕಷ್ಟು ಶೋ ಮಾಡಿದ್ದು, ಕಡಲ ತೀರದ ಹುಡುಗಿ ಈ ಪಾಟಿ ಎಕ್ಸ್‌ಪೋಸ್‌ಗೆ ಇಳಿದಿದ್ದಾಳೆಯೇ? ಎನ್ನುವುದು ಕುತೂಹಲ.

ಗಾಂಧಿನಗರದ 'ಮೈ' ದಾನಕ್ಕಿಳಿದಿರುವ ಶುಭಾ ಮಾತು.

ಹಲೋ ಶುಭಾ ಪೂಂಜಾ, ಕೋಟಿಗೊಂದ್ ಲವ್ ಸ್ಟೋರಿ ಸೌಂಡು ಜಾಸ್ತಿ ಆಗುತ್ತಿದೆಯಲ್ಲ?

ಹೌದೇ...! ನನಗೇನು ಗೊತ್ತಿಲ್ಲ. ಒಳ್ಳೆಯ ಸಿನಿಮಾ ಮಾಡಿದ್ದೇವೆ ಅಷ್ಟೆ. ಈ ಸೌಂಡ್ ಬಗ್ಗೆ ಗಮನ ಕೊಟ್ಟಿಲ್ಲ. ಯಾಕೆಂದರೆ ನಾನು ನಟಿ. ಸೌಂಡ್ ಎಂಜಿನಿಯರ್ ಅಲ್ಲ.

ಆಯಿತು, ನೇರವಾಗಿ ಕೇಳ್ತೀನಿ, ಈ ಚಿತ್ರದಲ್ಲಿ ತುಂಬಾ ಎಕ್ಸ್‌ಪೋಸ್ ಮಾಡಿದ್ದೀರಂತೆ?
ಕಥೆಗೆ ತಕ್ಕಂತೆ ಪಾತ್ರಗಳನ್ನು ನಿರ್ದೇಶಕರು ಕಂಪೋಸ್ ಮಾಡುತ್ತಾರೆ. ಅವರು ಹೇಳಿದಂತೆ ಮಾಡಬೇಕಲ್ಲೇ?
ಹೀಗಾಗಿ ನಾನು ಚಿತ್ರದಲ್ಲಿ ಒಂಚೂರು ಹಾಟ್ ಆಗಿಯೋ ಕಾಣಿಸಿಕೊಂಡಿದ್ದೇನೆ. ಎಕ್ಸ್‌ಪೋಸಿಂಗ್ ಅನ್ನುವುದಕ್ಕಿಂತ ಗ್ಲಾಮರಸ್ ಪಾತ್ರ ಎನ್ನುವುದು ಸೂಕ್ತ.

ಅಂದರೆ ಸಿನಿಮಾ ಪೂರ್ತಿ ಹೀಗೆ ಗ್ಲಾಮರ್ ಮೇಂಟೈನ್ ಮಾಡಿದ್ದೀರಾ?
ಅಯ್ಯೋ, ಹಾಗೇನು ಇಲ್ಲ. ಒಂದು ಹಾಡಿನಲ್ಲಿ ಈ ರೀತಿ ಕಾಣಿಸಿಕೊಂಡಿದ್ದೇನೆ. ಅಲ್ಲದೆ ಅದು ಫಾಲ್ಸ್‌ನಲ್ಲಿ ಚಿತ್ರೀಕರಣ ಮಾಡಿರುವುದರಿಂದ ಅಗತ್ಯಕ್ಕಿಂತ ಕೊಂಚ ಜಾಸ್ತಿಯೇ ಎದ್ದು ಕಾಣುತ್ತದೆ. ಇಷ್ಟಕ್ಕೂ ಸಿನಿಮಾ ನಟಿ ಅಂದ ಮೇಲೆ ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕು. ಪಾತ್ರ ಬೇಡಿದರೆ ಎಕ್ಸ್‌ಪೋಸಿಂಗ್ ಮಾಡಬೇಕು.

ಹೋಗ್ಲಿ ಈ 'ಮೈ' ದಾನದ ವಿಚಾರ ಬಿಡಿ. ಕೋಟಿಗೊಂದು ಲವ್ ಸ್ಟೋರಿಯಲ್ಲಿ ನಿಮ್ಮ ಪಾತ್ರವೇನು?
ನಾನು ಶಿರಸಿ ಭಾಗದ ಮುಗ್ಧ ಹುಡುಗಿ.
ಪ್ರೀತಿಗೆ ಸಿಲುಕುವ ನಾನು ನಾಯಕು ಜತೆ ಕಾಡು ಸೇರುತ್ತೇನೆ. ನಾಯಕ ಮತ್ತು ನಾಯಕಿ ನಡುವೆ ಕಥೆ ಸಾಗುವುದಕ್ಕಾಗಿ ಹೀಗೆ ಹಾಟ್ ಆಗಿ ಕಾಣಿಸಿಕೊಳ್ಳುತ್ತೇನೆ ಹೊರತು, ಇಡೀ ಚಿತ್ರದಲ್ಲಿ ನಾನು ಅಮಾಯಕಳು.

ಸರಿ, ಈಗ ನಿಮ್ಮ ಫ್ಲ್ಯಾಷ್ ಬ್ಯಾಕ್‌ಗೆ ಬರೋಣ. ಒಟ್ಟಾರೆ ನಿಮ್ಮ ಸಿನಿಮಾ ಜರ್ನಿ ಯಾಕೋ ಡಲ್ ಆಯಿತು ಅನಿಸುತ್ತಿದೆಯಲ್ಲ?
ಹೌದು. ಆದರೆ, ಕಳೆದ ವರ್ಷ ಒಟ್ಟು 6 ಚಿತ್ರಗಳು ಒಪ್ಪಿಕೊಂಡೆ. ಅದರಲ್ಲಿ ಕೆಲವು ಚಿತ್ರೀಕರಣಗೊಂಡವು. ಇನ್ನೂ ಕೆಲವು ಅರ್ಧಕ್ಕೆ ನಿಂತವು. ಶೂಟಿಂಗ್ ಮುಗಿಸಿಕೊಂಡ ಚಿತ್ರಗಳು ಬಿಡುಗಡೆಯಾಗಲಿಲ್ಲ.

ಯಾಕೆ ನಿಮ್ಮ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ? ಅಂಥ ಚಿತ್ರಗಳನ್ನು ಯಾಕೆ ಒಪ್ಪಿಕೊಳ್ಳತ್ತೀರಿ?
ನಾನು ಕಥೆ ನೋಡುತ್ತೇನೆ. ಚಿತ್ರ ಬಿಡುಗಡೆಯಾಗುವುದು, ಬಿಡುವುದು ನನ್ನ ಕೈಯಲ್ಲಿ ಇಲ್ಲ. ಅದರ ಬಗ್ಗೆ ನಿರ್ಮಾಪಕರಿಗೆ ಆಸಕ್ತಿ ಇರಬೇಕು. ಮೀನಾಕ್ಷಿ, ಸಮೋಸ ಚಿತ್ರಗಳು ಮುಗಿಸಿದ್ದೇನೆ. ಯಾವುದು ಬಿಡುಗಡೆ ಆಗುತ್ತದೋ ಗೊತ್ತಿಲ್ಲ. ಅದೃಷ್ಟ ಚಿತ್ರದ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ವರ್ಷ ಡಿಸೆಂಬರ್ ಒಳಗೆ ಕೋಟಿಗೊಂದು ಲವ್ ಸ್ಟೋರಿ, ಚಿರಾಯು, ತರ್ಲೆ ನನ್ಮಕ್ಕಳು ಈ ಚಿತ್ರಗಳು ಬಿಡುಗಡೆಯಾಗಲಿದ್ದು, ಇವುಗಳ ಮೇಲೆ ಭರವಸೆ ಇಟ್ಟುಕೊಂಡಿದ್ದೇನೆ. ಉಳಿದ ಚಿತ್ರಗಳ ಬಗ್ಗೆ ಏನೂ ಹೇಳಲಾರೆ.

ಹಾಗಾದರೆ ನಟಿ ಶುಭಾಪೂಂಜಾ ತುಂಬಾ ಜೋರಾಗಿ 'ಮೈ' ದಾನಕ್ಕಿಳಿದಿದ್ದಾರೆ ಅಂತಾಯಿತು?

ನೀವು ಯಾವ ಮೈದಾನದ ಬಗ್ಗೆ ಕೇಳುತ್ತಿದ್ದೀರೋ ತಿಳಿಯದು. ಆದರೆ, ಊರಿಗೆ ಬಂದವಳು ನೀರಿಗಿಳಿಯಲೇಬೇಕು ಎನ್ನುವ ಹಾಗೆ ಆಟಕ್ಕೆ ಆಯ್ಕೆಯಾದ ಮೇಲೆ ಮೈದಾನಕ್ಕೆ ಇಳಿಯಲೇಬೇಕಲ್ಲವೇ?


- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com