ಮೊದಲೇ ರೋಮನ್ ಕ್ಯಾಥಲಿಕ್ ಧರ್ಮಾನುಯಾಯಿಗಳು ಸಾಧು ಸ್ವಭಾವಕ್ಕೆ ಹೆಸರು.
ಅದೇ ವಂಶಜರಾದ ಸಹಾಯಶೀಲನ್ ಬಾಲ್ಯದಲ್ಲಿ ತುಂಬಾನೇ ಮುಗ್ದನಾಗಿದ್ದ. ಅದನ್ನು ಕಂಡ ತಂದೆ ಈತನನ್ನು ಸಾಧು ಎಂದೇ ಕರೆಯುತ್ತಿದ್ದರು. 'ಶ್' ಚಿತ್ರದಲ್ಲಿ ಉಪೇಂದ್ರ ಇವರ ಕೋಗಿಲೆಯಂಥ ಸಂಗೀತ ಪ್ರತಿಭೆ ಕಂಡು 'ಕೋಕಿಲ' ಎಂಬ ಪದವನ್ನು ಜೊತೆಗೆ ಸೇರಿಸಿ ದರು.
ರಕ್ತಕಣ್ಣೀರು ಚಿತ್ರವನ್ನು ನಿರ್ಮಿಸುವಾಗ ಸ್ವಾಮಿಯೊಬ್ಬರ ಮಾತುಕೇಳಿದ ನಿರ್ಮಾಪಕ ಮುನಿರತ್ನ 'ಕ'ಕಾರ ಮೊದಲಿರಬೇಕೆಂದು ಇವರ ಹೆಸರನ್ನು ಕೋಕಿಲ ಸಾದು ಮಾಡಿಬಿಟ್ಟರು. ಚಿತ್ರದ ಯಶಸ್ಸನ್ನು ಕಂಡ ಸ್ವತಃ ಸಾಧು ಕೂಡ ಅದನ್ನೇ ಮುಂದುವರಿಸಿದರು. ಆದರೆ ಆ ಮ್ಯಾಜಿಕ್ ಮತ್ತೆ ಮರುಕಳಿಸದೆ ಹೋದಾಗ ಮತ್ತೆ ಸಾಧು ಕೋಕಿಲರಾಗಿಯೇ ಉಳಿದರು.
ತಾಯಿ ಮಂಗಳಾ ಮೇರಿ ಸಂಗೀತ ನಿರ್ದೇಶಕರಾದ ರಾಜನ್ ನಾಗೇಂದ್ರ ರಂಥ ಮಹಾರಥರ ಬಳಿ ಕೋರಸ್ ಹಾಡುಗಾರ್ತಿಯಾಗಿದ್ದವರು. ತಂದೆ ನಟೇಶನ್ ಅಲ್ಲೇ ವಯೊಲಿನ್ ನುಡಿಸುತ್ತಿದ್ದರು. ದಂಪತಿಯ ಮೂವರು ಮಕ್ಕಳಲ್ಲಿ ಲಯೇಂದ್ರ ಡ್ರಮ್ಮರಾಗಿ, ನಟರಾಗಿ, ಸಂಗೀತ ನಿರ್ದೇಶಕರಾಗಿ ಗುರುತಿಸಲ್ಪಟ್ಟಿದ್ದಾರೆ. (ಇವರ ಪುತ್ರ ಮ್ಯಾಥ್ಯುಸ್ ಮನು ಕೂಡ ಸಂಗೀತ ನಿರ್ದೇಶಕ ಎಂಬುದು ಗಮನಾರ್ಹ) ಎರಡನೆಯವರಾದ ಸಾಧು ಭಾರತದ ವೇಗದ ಕೀಬೋರ್ಡ್ ಪ್ಲೇಯರ್ಗಳನ್ನು ಒಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ.
ಮೂರನೇಯವರಾದ ಬೆನೆಡಿಕ್ಟ್ ಹಂಸಲೇಖಾರ ವಾದ್ಯದ ತಂಡದಲ್ಲಿ ಗುರುತಿಸಿಕೊಂಡಿದ್ದವರು. ಕಿಡ್ನಿ ವೈಫಲ್ಯದಿಂದ ಮೃತರಾದರು. ತಂಗಿ ಉಷಾ ಕೂಡ ಟ್ರ್ಯಾಕ್ ಸಿಂಗರ್ ಆಗಿ ಜನಪ್ರಿಯರು. ಇಷ್ಟು ಸಂಗೀತ ಸಾಲದೆಂಬಂತೆ ಮೇರಿ ಸಲೀಮ್ ಎಂಬ ಯುವತಿ ಚೆನ್ನಾಗಿ ಹಾಡುತ್ತಾಳೆಂಬ ಕಾರಣದಿಂದಲೇ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಸಾಧು.
ಇವರ ರಿಯ ಪುತ್ರ ಸುರಾಗ್ಗೆ 18 ವರ್ಷ. ಆತನೂ ಸಂಗೀತ ನಿರ್ದೇಶಕನಾಗುವ ಪ್ರಯತ್ನ ನಡೆಸಿದ್ದಾನೆ. ಎರಡನೆಯ ಪುತ್ರ ಸೃಜನ್ಗೂ ಸಂಗೀತದಲ್ಲಿ ಆಸಕ್ತಿ. ಒಟ್ಟು ಸಂಗೀತ ಸಮೃದ್ಧವಾದ ಸಂಸಾರ ಸಮುದ್ರದಲ್ಲಿ ಸಾಧುನದ್ದು ಮಾತ್ರ ಸಹಸ್ರ ಮುಖ. ಮೇಲ್ನೋಟಕ್ಕೆ ಗಾಯಕ, ನಟ, ಸಂಗೀತ ನಿರ್ದೇಶಕ ಮತ್ತು ಸಿನೆಮಾ ನಿರ್ದೇಶಕರಾಗಿ ಗುರುತಿಸಲ್ಪಡುವುದರ ಜೊತೆಗೆ ಅನಧಿಕೃತವಾಗಿ ಸಿನೆಮಾದ ಎಲ್ಲ ಭಾಗದಲ್ಲಿಯೂ ತೊಡಗಿಸಿಕೊಳ್ಳಬಲ್ಲ ಮೇಧಾವಿ.
Advertisement