
ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನೆಮಾಗಳಿಗೆ ರಿಮೇಕ್ ಆಫರ್ ಗಳ ಸುರಿಮಳೆಯೇ ಇದೆ. ರಿಮೇಕ್ ಆಫರ್ ಬಂದಿರುವ ಇತ್ತೀಚಿನ ಚಿತ್ರ ಅಜಯ್ ರಾವ್ ನಿರ್ಮಿಸಿರುವ ಹಾಗೂ ನಟಿಸಿರುವ 'ಕೃಷ್ಣ ಲೀಲಾ'. ತಮಿಳು ನಟ ಜೀವಾ ಅವರ ತಂದೆ ಹಾಗು ತಮಿಳು ನಿರ್ಮಾಪಕ ಆರ್ ಬಿ ಚೌಧರಿ ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್ ಅಡಿ ರಿಮೇಕ್ ಹಕ್ಕುಗಳನ್ನು ಕೊಂಡಿದ್ದಾರೆ.
ಈ ರಿಮೇಕಿನಲ್ಲಿ ಜೀವಾ ನಾಯಕನಟನಾಗಿ ನಟಿಸಲಿದ್ದಾರೆ ಎಂಬುದು ವದಂತಿ. ಇದರಿಂದ ಉತ್ತೇಜಿತರಾಗಿರುವ ಅಜಯ್ ರಾವ್ "ನಾವು ಹೊರ ರಾಜ್ಯದ ಸಿನೆಮಾಗಳನ್ನು ಕನ್ನಡದಲ್ಲಿ ರಿಮೇಕ್ ಮಾಡುತ್ತಿದ್ದೇವೆ. ಆದರೆ ಬೇರೆ ರಾಜ್ಯಗಳು ನಮ್ಮ ಸಿನೆಮಾಗಳನ್ನು ರಿಮೇಕ್ ಮಾಡಲು ಆಸಕ್ತಿ ತೋರಿದಾಗ, ನಮ್ಮ ಚಿತ್ರೋದ್ಯಮವೂ ಬೆಳೆಯುತ್ತಿದೆ ಎಂದೆನಿಸುತ್ತದೆ. ಅಲ್ಲದೆ ಈ ಸಿನೆಮಾದ ಹಕ್ಕುಗಳನ್ನು ಕೊಂಡಿರುವುದು ಸಾಮಾನ್ಯ ಬ್ಯಾನರ್ ಅಲ್ಲ. ಹಾಗೂ ಒಳ್ಳೆಯ ಬೆಲೆಗೆ ರಿಮೇಕ್ ಹಕ್ಕುಗಳನ್ನು ಅವರು ಕೊಂಡಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಸಿನೆಮಾ ನೋಡಿದ ತಮಿಳು ನಿರ್ಮಾಪಕರು ಸಿನೆಮಾದ ವಿಷಯದ ಬಗ್ಗೆ ಬಹಳ ಸಂತೋಷಪಟ್ಟಿದ್ದು ಇದಕ್ಕೆ ಬೇರೆ ಭಾಷೆಯಲ್ಲೂ ಮಾರುಕಟ್ಟೆ ಇದೆ ಎಂದು ನಿರ್ಧರಿಸಿದ್ದಾರೆ. "ಈ ಸಿನೆಮಾ ಮಾಸ್ ಪ್ರೇಕ್ಷಕರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುತ್ತದೆ. ನನಗೆ ಮತ್ತು ನಿರ್ದೇಶಕ ಶಶಾಂಕ್ ಅವರಿಗೆ ರಿಮೇಕ್ ಆಗುತ್ತಿರುವ ಸ್ಕ್ರಿಪ್ಟ್ ಮೂಲದಷ್ಟೇ ಚೆನ್ನಾಗಿ ಮೂಡಿಬರಬೇಕೆಂಬುದು ಆಸೆ. ಅಲ್ಲೂ ಕೂಡ ಇದೇ ಮ್ಯಾಜಿಕ್ ಸೃಷ್ಟಿಸುತ್ತದೆ ಎಂದು ನಂಬುತ್ತೇನೆ" ಎನ್ನುತ್ತಾರೆ ಅಜಯ್ ರಾವ್.
Advertisement