
ಬೆಂಗಳೂರು: ನಟ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಹಿಂದಿನ ಸಿನೆಮಾಗಳಂತೆ ಉಪ್ಪಿ೨ ಕೂಡ ಪ್ರೇಕ್ಷಕರ ಅಪಾರ ಗಮನ ಸೆಳೆದಿದೆ. ಕನ್ನಡ ಪ್ರೇಕ್ಷಕರಷ್ಟೇ ಅಲ್ಲದೆ ಉಪೇಂದ್ರ ಅವರಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಅಭಿಮಾನಿಗಳಿದ್ದು ಅಲ್ಲೂ ಕೂಡ ಉಪ್ಪಿ ಮೇನಿಯಾ ಪ್ರಾರಂಭವಾಗಿದೆಯಂತೆ.
ಅಲ್ಲೂ ಅರ್ಜುನ್ ಅವರ 'ಗುರ್ರಂ ರೇಸ್' ಸಿನೆಮಾಗೆ ಹಣ ಹೂಡಿದ್ದ ನಿರ್ಮಾಪಕ ನಲ್ಲಮಳುಪು ಬುಜ್ಜಿ ತೆಲುಗಿಗೆ ಡಬ್ ಆಗಲಿರುವ ಈ ಸಿನೆಮಾದ ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ. ಉಪ್ಪಿ೨ ತೆಲುಗಿನಲ್ಲಿ ಉಪೇಂದ್ರ೨ ಎಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೆ.
ಸದ್ಯಕ್ಕೆ ಡಬ್ಬಿಂಗ್ ಕೆಲಸ ಮುಂಚೂಣಿಯಲ್ಲಿದ್ದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಸಿನೆಮಾ ಬಿಡುಗಡೆ ಕಾಣಲಿದೆಯಂತೆ. ಕರ್ನಾಟಕದಲ್ಲಿ ೨೫೦ ಥಿಯೇಟರ್ ಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದ್ದು ತೆಲುಗು ಮಾರುಕಟ್ಟೆಯಲ್ಲಿ ೨೦೦ ಸಿನೆಮಾಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ಎನ್ನಲಾಗಿದೆ.
Advertisement