
ಬೆಂಗಳೂರು: ನಟ ನಿರ್ದೇಶಕ ಉಪೇಂದ್ರ ನಿರ್ದೇಶನದ ಉಪ್ಪಿ೨ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಈಗ ಇದಕ್ಕೆ ಹೊಸದೊಂದು ತಂತ್ರ ಸೇರ್ಪಡೆಯಾಗಿದೆ. ಈಗಾಗಲೇ ಕರ್ನಾಟಕದಾದ್ಯಂತ ೨೫೦ ಚಿತ್ರಮಂದಿರಗಳು ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ೪೦೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೆ. ಇಷ್ಟಾಗಿಯೂ ಚಿತ್ರದ ಟಿಕೆಟ್ ಗಳಿಗೆ ಈಗಾಗಲೇ ಅಪಾರ ಬೇಡಿಕೆ ಇದೆಯಂತೆ. ಆದುದರಿಂದ ಪ್ರೇಕ್ಷಕರ ಈ ಕಾತರವನ್ನು ತಣಿಸಲು ಅವರ ಕೋರಿಕೆಯಂತೆ ಉಪ್ಪಿ೨ ಚಿತ್ರಪ್ರದರ್ಶನವನ್ನು ಮಧ್ಯರಾತ್ರಿಗೂ ವಿಸ್ತರಿಸುವ ಚಿಂತನೆ ನಡೆದಿದೆ ಎನ್ನುತ್ತಾರೆ ವಿತರಕ ಶ್ರೀಕಾಂತ್.
"ಅಭಿಮಾನಿಗಳ ಕೋರಿಕೆಯನ್ನು ಈಡೇರಿಸಲು ನಾವು ಚಿಂತನೆ ನಡೆಸಿದ್ದೇವೆ. ಆಗಸ್ಟ್ ೧೪ ರಂದು ಮಧ್ರಾತ್ರಿಯ ಪ್ರದರ್ಶನ ಏರ್ಪಡಿಸಲು ಚಿತ್ರಮಂದಿರ ಮಾಲಿಕರ ಜೊತೆ ಮಾತುಕತೆ ನಡೆಸಿದ್ದೇನೆ. ಇದು ಅತಿ ಹೆಚ್ಚು ಬೇಡಿಕೆ ಇರುವ ಕಡೆಗಳಲ್ಲಿ ಸಾಧ್ಯವಾಗಬಹುದು" ಎನ್ನುತ್ತಾರೆ ಶ್ರೀಕಾಂತ್.
ಈಗಾಗಲೇ ಮುಂಗಡ ಬುಕಿಂಗ್ ಪ್ರಾರಂಭವಾಗಿದ್ದು, ಉಪೇಂದ್ರ ಅವರ ಅತಿ ದೊಡ್ಡ ಅಭಿಮಾನಿ ಕಿಶೋರ್ ಬನ್ನೇರಘಟ್ಟ ರಸ್ತೆಯಲ್ಲಿರುವ ಸಿನೆಪೊಲೀಸ್ ಚಿತ್ರಮಂದಿರದಲ್ಲಿ ೪೦೦ ಟಿಕೆಟ್ ಗಳಿಗೆ ಬೇಡಿಕೆಯಿಟ್ಟಿದ್ದಾರೆ. ಸಿನೆಪೊಲೀಸ್ ವ್ಯವಸ್ಥಾಪಕರ ಪ್ರಕಾರ "ಕಳೆದ ೧೫ ದಿನಗಳಿಂದ ಕಿಶೋರ್ ಎಂಬುವವರು ಮುಂಗಡ ಬುಕಿಂಗ್ ಬಗ್ಗೆ ವಿಚಾರಿಸುತ್ತಿದ್ದಾರೆ. ಉಪ್ಪಿ೨ ಟಿಕೆಟ್ ಕೌಂಟರ್ ತೆರೆದ ಮೇಲಷ್ಟೇ ಅವರ ಮನವಿಯನ್ನು ಪರಿಗಣಿಸಬಹುದು" ಎನ್ನುತ್ತಾರೆ.
ಕಿಶೋರ್ ಉತ್ತರಹಳ್ಳಿ ಉಪೇಂದ್ರ ಅಭಿಮಾನಿಗಳ ಬಳಗದ ಸದಸ್ಯ.
Advertisement