
ಸಂಗೀತ ನಿರ್ದೇಶಕರು ಜಿ.ಕೆ.ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಶೀಘ್ರವೇ ನಾಯಕ ನಟಾಗಿ ಬೆಳ್ಳಿ ತೆರೆಗೆ ಪರಿಚಯವಾಗಲಿದ್ದಾರೆ. ಮುಂಗಾರು ಮಳೆ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದು 2008 ರಲ್ಲಿ ಹಾಗೆ ಸುಮ್ಮನೆ ಚಿತ್ರದ ಮೂಲಕ ನಿರ್ದೇಶಕನಾಗಿದ್ದ ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಪೃಥ್ವಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ಜಿ.ಕೆ ವೆಂಕಟೇಶ್ ಕುಟುಂಬದಿಂದ ಒಬ್ಬ ನಾಯಕನಟನನ್ನು ನನ್ನ ನಿರ್ದೇಶನದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಿಸುವುದು ಹೆಮ್ಮೆಯ ವಿಷಯ ಎಂದಿದ್ದಾರೆ ಪ್ರೀತಂ ಗುಬ್ಬಿ. ಜಿ.ಕೆ ವೆಂಕಟೇಶ್, ಡಾ.ರಾಜ್ ಕುಮಾರ್ ಅವರ 50 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಮಾರ್ಗದರ್ಶನ ನೀಡಿದ್ದರು, ಅಂತಹ ಶ್ರೇಷ್ಠ ಕಲಾವಿದರ ಕುಟುಂಬದಿಂದ ಯಾರನ್ನಾದರೂ ಚಿತ್ರರಂಗಕ್ಕೆ ಪರಿಚಯಿಸುವುದು ಹೆಮ್ಮೆಯ ವಿಚಾರ ಎಂದು ಪ್ರೀತಂ ಗುಬ್ಬಿ ಹೇಳಿದ್ದಾರೆ.
ಪೃಥ್ವಿ ನಟಿಸಲಿರುವ ಸಿನಿಮಾ ಚಿತ್ರಕಥೆಯನ್ನು ಪ್ರೀತಂ ಗುಬ್ಬಿಯೇ ಬರೆದಿದ್ದು ಸಿನಿಮಾಗೆ ಇನ್ನಷ್ಟೇ ಟೈಟಲ್ ನೀಡಬೇಕಾಗಿದೆ. ಪೃಥ್ವಿ ತಮ್ಮ ಮೊದಲ ಚಿತ್ರದಲ್ಲಿ ಬೈಕರ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ನಾಯಕಿ ಪಾತ್ರಕ್ಕೆ ಮಾಳವಿಕಾ ಮೋಹನನ್ ಅವರನ್ನು ಆಯ್ಕೆ ಮಾಡಲಾಗಿದ್ದು ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ಮಾಳವಿಕಾ ಮೋಹನನ್ ಮಲಯಾಳಂ ನಲ್ಲೂ ಅಭಿನಯಿಸಿದ್ದು ಪ್ರೀತಂ ಗುಬ್ಬಿ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮೊದಲ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Advertisement