
ವಾಸ್ತುಪ್ರಕಾರ ಈ ಚಿತ್ರಕ್ಕೆ 'ಯು' ಅಲ್ಲದೇ ಬೇರೆ ಯಾವ ಸರ್ಟಿಫಿಕೇಟೂ ಕೊಡೋಕೆ ಸಾಧ್ಯವೇ ಇಲ್ಲ ಅಂದುಬಿಟ್ಟರಂತೆ ಸೆನ್ಸಾರ್ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯ ತಂಡ!
ಕಳೆದ ಶುಕ್ರವಾರ ರೇಣುಕಾಂಬಾ ಪ್ರಿವ್ಯೂ ಥೇಟರಿನಲ್ಲಿ ವಾಸ್ತುಪ್ರಕಾರ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಚಿತ್ರ ನೋಡಿ ವಿಪರೀತ ಖುಷಿಪಟ್ಟಿದೆ. ಕಟ್ಸ್-ಮ್ಯೂಟ್ಸ್ ಏನೂ ನೀಡದೆ ಶಭಾಶ್ ಎಂದಿದೆ.
ಅಲ್ಲದೆ ಜಗ್ಗೇಶ್ ನಟನೆಯ ಬಗ್ಗೆ ಸೆನ್ಸಾರ್ ಕಮಿಟಿ ವಿಶೇಷ ಸರ್ಟಿಫಿಕೇಟ್ ನೀಡಿದೆಯಂತೆ. ಅವರ ಪ್ರಕಾರ ಜಗ್ಗೇಶ್ ವೃತ್ತಿಜೀವನದ ಅತ್ಯುತ್ತಮ ಚಿತ್ರ ವಾಸ್ತುಪ್ರಕಾರ ಅಂದರೆ ಅತಿಶಯೋಕ್ತಿ ಅಲ್ಲವಂತೆ. ಈ ಮೊದಲೇ ಯೋಗರಾಜ್ ಭಟ್ ಮತ್ತು ಗ್ಯಾಂಗ್ ವಾಸ್ತುಪ್ರಕಾರ ಚಿತ್ರದ ಹೈಲೈಟೇ ಜಗ್ಗೇಶ್ ಎಂದು ಹೇಳಿದ್ದರೂ ಈಗ ಸೆನ್ಸಾರ್ ಕೂಡ ಆ ಮಾತನ್ನೇ ಪುನರುಚ್ಚರಿಸಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಆದರೂ ಕಳೆದ ವರ್ಷವೇ ಶುರುವಾಗಿರುವ ಚಿತ್ರ ಇನ್ನಾದರೂ ತೆರೆಗೆ ಬಂದಿಲ್ಲ ಎಂದು ಭಟ್ಟರ ಅಭಿಮಾನಿಗಳು ಬೇಸರದಲ್ಲಿದ್ದಾಗಲೇ ಸೆನ್ಸಾರ್ ಆಗಿರುವುದು ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಬಹುದು.
ತಂಡದ ಮೂಲಗಳ ಪ್ರಕಾರ ಸೆನ್ಸಾರ್ ಆಗಿ ಮೂರು ವಾರಗಳಷ್ಟು ಪ್ರಚಾರಕ್ಕೆ ಸಮಯವಿರೋದ್ರಿಂದ ಫೆಬ್ರವರಿ ಇಪ್ಪತ್ತೇಳಕ್ಕೆ ಬಿಡುಗಡೆ ಮಾಡುವ ಆಲೋಚನೆ ಇದೆ. ಅಪ್ಪಿತಪ್ಪಿ ಮಿಸ್ ಆದರೂ ಮಾರ್ಚ್ ಮೊದಲ ವಾರದಲ್ಲಿ ವಾಸ್ತುಪ್ರಕಾರ ತೆರೆಕಾಣುವುದು ಗ್ಯಾರಂಟಿ ಅಂದ್ಕೋಬಹುದು. ಅವರು ಆಸುಪಾಸಿನ ಚಿತ್ರಗಳಿಗೆ ಭಯಪಡುತ್ತಿಲ್ಲ. ಎಕ್ಸಾಮು ಕಾಲೇಜು ಮುಂತಾದ ವಾಸ್ತುಗಳನ್ನೂ ನೋಡುತ್ತಿಲ್ಲ. ಅವರ ಎದುರು ನೋಡುತ್ತಿರುವುದು ವಿಶ್ವಕಪ್ ಕ್ರಿಕೆಟ್ಟನ್ನು. ಭಾರತ ಹೇಗೆ ಆಡುತ್ತದೆ ಅನ್ನೋದರ ಮೇಲೆ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಮಾಡುವ ಬಗ್ಗೆ ಭಟ್ಟರು ಯೋಚಿಸುತ್ತಿದ್ದಾರೆ.
ಹಾಗಂತ ಭಾರತ ಸೋಲಲಿ ಎಂದೇನೂ ಅವರ ಆಶಯವಲ್ಲವಂತೆ. ಜಗ್ಗೇಶ್, ರಕ್ಷಿತ್, ಭಟ್ರು ಎಲ್ಲರೂ ಕ್ರಿಕೆಟ್ ಪ್ರೇಮಿಗಳೇ ಆಗಿರೋದ್ರಿಂದ, ಭಾರತ ಚೆನ್ನಾಗಿ ಆಡಿದ್ದೇ ಆದಲ್ಲಿ, ವಿಶ್ವಕಪ್ ಗೆದ್ದ ಮೇಲೆ ಆ ಸಂಭ್ರಮದಲ್ಲೇ ರಿಲೀಸ್ ಮಾಡೋಣ ಅಂತ ತಿಂಗಳುಗಟ್ಟಲೆ ಮುಂದೂಡೋಕೂ ಅವರು ತಯಾರಿದ್ದಾರೆ. ಒಟ್ಟಾರೆ ವಾಸ್ತುಪ್ರಕಾರ ಚಿತ್ರದ ಬಿಡುಗಡೆ ಭವಿಷ್ಯ ಭಾರತ ಕ್ರಿಕೆಟ್ ತಂಡದ ಕೈಲಿದೆ ಅನ್ನಬಹುದು!
Advertisement