ಹಂಸಲೇಖರ ಮಲ್ಲಿಗೆ

ಹಂಸಲೇಖ ಅಂದರೆ ಕನ್ನಡ ಚಿತ್ರೋದ್ಯಮದ ಸಂಗೀತ ಲೋಕದ ಅಂಜದ ಗಂಡು...
ಹಂಸಲೇಖ
ಹಂಸಲೇಖ

ಹಂಸಲೇಖ ಅಂದರೆ ಕನ್ನಡ ಚಿತ್ರೋದ್ಯಮದ ಸಂಗೀತ ಲೋಕದ 'ಅಂಜದ ಗಂಡು'. ಆ ಕಾಲದಿಂದ ಈ ಕಾಲದವರೆಗೂ ಇವರದ್ದೇ ಸಂಗೀತದ ಹಾಡುಗಳದ್ದೇ 'ಅಂತಿಮ ತೀರ್ಪು' ಎನ್ನುವಂತೆ ಎಲ್ಲರನ್ನೂ ಸೆಳೆದ ಹಂಸಲೇಖರ ಹಾಡುಗಳೆಂದರೆ, 'ಅನುರಾಗದ ಅಲೆಗಳು'. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹಂಸಲೇಖ ಸೇರಿದರೆ ಚಿತ್ರಪ್ರೇಮಿಗಳಿಗೆ 'ಅಪೂರ್ವ ಜೋಡಿ'ಯನ್ನು ಕಂಡಷ್ಟು ಸಂಭ್ರಮ. ಈಗ ಸಂಗೀತ ಲೋಕದ ಈ 'ದೇವರ ಮಗ' ಈ ಗ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ ಎನ್ನುವುದು ಸದ್ಯದ ಬ್ರೇಕಿಂಗ್ ನ್ಯೂಸ್.

ಕನ್ನಡ ಚಿತ್ರರಂಗದ ನಾದಬ್ರಹ್ಮ ಹಂಸಲೇಖ ಅವರು ಕೊನೆಗೂ ಸಿನಿಮಾ ನಿರ್ದೇಶನಕ್ಕಿಳಿಯುವುದು ಖಚಿತವಾಗಿದೆ. ಹಲವು ವರ್ಷಗಳಿಂದ ಹಂಸಲೇಖ ಅವರು ಸಿನಿಮಾ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿತ್ತು. ಆದರೆ, ಈಗ ಯಾವುದೇ ಸುದ್ದಿ, ಗದ್ದಲವಿಲ್ಲದೆ ತಮ್ಮದೇ ಒಂದು ತಂಡ ಕಟ್ಟಿಕೊಂಡು ಸಿನಿಮಾ ನಿರ್ದೇಶನಕ್ಕೆ ತಯಾರಿ ನಡೆಸಿಕೊಂಡಿದ್ದಾರೆ.

ತಾನು ಚಿತ್ರರಂಗದ ಹಿರಿಯಣ್ಣ ಎನಿಸಿಕೊಂಡರೂ, 'ನಾನು ಇನ್ನೂ ಯಂಗ್ ಅಂಡ್ ಎನರ್ಜಿ ಬಾಯ್‌' ಎನ್ನುವಂತೆ ಸಂಗೀತ, ದೇಶಿ ಸಂಸ್ಕೃತಿ ಕಟ್ಟುವುದರಲ್ಲಿ ನಿರತರಾಗಿರುವ ಹಂಸಲೇಖ ಅವರ ಸಂಗೀತದ ಲಾಲಿತ್ಯದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಚಂದನವನದ ರಾಗಗಳ ಮಾಸ್ಟರ್ ಹಂಸಲೇಖ, ಕನ್ನಡದ ಬೇರೆ ಯಾವ ಸಂಗೀತ ನಿರ್ದೇಶಕರೂ ಸಾಧಿಸದ ಸಾಧನೆ ಮಾಡಿದ್ದಾರೆ ಅಂದರೆ ಅದಕ್ಕೆ ಅವರ ಸಂಗೀತ ಸಂಯೋಜನೆಯಲ್ಲಿ 300ಕ್ಕೂ ಹೆಚ್ಚು ಚಿತ್ರಗಳು ಮೂಡಿ ಬಂದಿರುವುದು ಮಾತ್ರ ಕಾರಣವಲ್ಲ. ಸಂಗೀತ, ಸಿನಿಮಾ ಆಚೆಗೆ ನಾದಬ್ರಹ್ಮನ ಹೆಸರು ಕೇಳಿಸುತ್ತದೆ.

ಅಂದಿನಿಂದ ಇಂದಿನ ತನಕ ಚಿತ್ರ ಸೀಮೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಹಂಸಲೇಖ ಈಗ ಸಿನಿಮಾ ನಿರ್ದೇಶನಕ್ಕಿಳಿಯುವ ಮೂಲಕ ತಮ್ಮ 'ಬಣ್ಣದ ಗೆಜ್ಜೆ'ಯ ಪಯಣಕ್ಕೊಂದು ನಿರ್ದೇಶನದ 'ಸ್ಪರ್ಶ' ನೀಡಲು ಮುಂದಾಗಿದ್ದಾರೆ. ತಮ್ಮ ಚಿತ್ರಕ್ಕೆ ತಾವೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದು, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಸಿನಿಮಾ ಪ್ಯಾಷನ್ ಇಟ್ಟುಕೊಂಡಿರುವ ಯುವಕರ ತಂಡವೊಂದು ಮುಂದೆ ಬಂದಿದ್ದು, ಹಂಸಲೇಖರ ಸಿನಿಮಾ ನಿರ್ಮಾಣಕ್ಕೆ ಇವರ ಸಾರಥ್ಯ ಇದೆ ಎನ್ನಲಾಗುತ್ತಿದೆ.

ಹಂಸಲೇಖರ ನಿರ್ದೇಶನದ ಸಿನಿಮಾ ಅಂದರೆ ಹೇಗಿರುತ್ತದೆ? ಎನ್ನುವ ಕುತೂಹಲ ಸಹಜ. ಆದರೆ, 'ಪ್ರೇಮಲೋಕ', 'ರಣಧೀರ' ಚಿತ್ರಗಳ ಫ್ಲೇವರ್ ಇರುತ್ತದೆಂಬುದು ಮಾತ್ರ ಸತ್ಯ. ಪ್ರೀತಿ, ಪ್ರೇಮ ಮತ್ತು ಸಂಗೀತಮಯ ಸಿನಿಮಾ ನಿರ್ದೇಶಿಸಿಲಿದ್ದಾರೆಂಬುದು ಅವರದ್ದೇವಲಯದ ಮಾತು.

ಅಂದ ಹಾಗೆ ಹಂಸಲೇಖ ನಿರ್ದೇಶನದ ಚಿತ್ರದ ಹೆಸರು ಏನು?

ನಾಲ್ಕೈದು ಶೀರ್ಷಿಕೆಗಳನ್ನು ಇಟ್ಟುಕೊಂಡಿದ್ದು, ಅದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆಂದು ನೋಡಬೇಕಿದೆ. ಆದರೆ, 'ಸೂಜಿ ಮಲ್ಲಿಗೆ' ಎನ್ನುವ ಹೆಸರು ಇಟ್ಟುಕೊಳ್ಳುವ ಸಾಧ್ಯತೆಗಳಿವೆ.

'ನಾನು ಸಿನಿಮಾ ನಿರ್ದೇಶನಕ್ಕಿಳಿದಿರುವುದು ಹೌದು. ಅಲ್ಲದೆ ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿ ಸಹ ಇದ್ದು, ಮೊದಲ ಪ್ರಯತ್ನದಲ್ಲೇ ಕೊಂಚ ಹೆಚ್ಚೇ ಎನ್ನುವಂಥ ಭಾರ ಹೊತ್ತುಕೊಂಡಿದ್ದೇನೆ. ನನ್ನ ಜತೆಗೆ ಬೇರೆಯವರು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಸಲ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದು ಯಾವುದೇ ಕಾರಣಕ್ಕೂ ಸಿನಿಮಾ ತಡವಾಗಲ್ಲ. ಜನವರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಅಂದುಕೊಂಡ ಸಮಯಕ್ಕೆ ಚಿತ್ರವನ್ನು ತೆರೆ ಮೇಲೆ ತರುತ್ತೇನೆ' ಎನ್ನುತ್ತಾರೆ ಹಂಸಲೇಖ. ಸೂಪರ್ ಕ್ವಾಲಿಟಿ ಇರುವ ತಾಂತ್ರಿಕ ತಂಡವನ್ನು ಒಳಗೊಂಡಿರುವ ಈ ಚಿತ್ರದ ಚಿತ್ರೀಕರಣ ಮಲೆನಾಡು ಹಾಗೂ ವಿದೇಶದಲ್ಲಿ ನಡೆಯಲಿದೆ. ಒಟ್ಟಿನಲ್ಲಿ ಹಂಸಲೇಖ ಅವರ ನಿರ್ದೇಶನದ ಕನಸು ಸದ್ಯದಲ್ಲೇ ಈಡೇರುತ್ತಿದೆ. ಸಂಗೀತ ಗುರುಗಳ ಆ್ಯಕ್ಷನ್ ಕಟ್‌ನಲ್ಲಿ ಮೂಡಿಬರುವ ಸಿನಿಮಾ ಹೇಗಿರುತ್ತದೆಂಬ ಕುತೂಹಲವಂತೂ ಇದ್ದೇ ಇರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com