ಪ್ರಶಸ್ತಿ ಹಂಚಿಕೊಳ್ಳಲು ಗೆಳೆಯರು ರೆಡಿ!

ಮೈನಾ ಸಂಭಾಷಣೆ ಪ್ರಶಸ್ತಿ ಕಿತ್ತಾಟ, ಹೊಂದಾಣಿಕೆ ಮೂಲಕ ಇತ್ಯರ್ಥ
ಮೈನಾ ಚಿತ್ರದ ನಿರ್ದೇಶಕ ನಾಗಶೇಖರ್ ಮತ್ತು ಪತ್ರಕರ್ತ ಮಂಜುನಾಥ್ ಸಂಜೀವ್ (ಸಂಗ್ರಹ ಚಿತ್ರ)
ಮೈನಾ ಚಿತ್ರದ ನಿರ್ದೇಶಕ ನಾಗಶೇಖರ್ ಮತ್ತು ಪತ್ರಕರ್ತ ಮಂಜುನಾಥ್ ಸಂಜೀವ್ (ಸಂಗ್ರಹ ಚಿತ್ರ)

ಮೈನಾ ಸಂಭಾಷಣೆ ಪ್ರಶಸ್ತಿ ಕಿತ್ತಾಟ, ಹೊಂದಾಣಿಕೆ ಮೂಲಕ ಇತ್ಯರ್ಥ
ಬೆಂಗಳೂರು:
ಮೈನಾ ಚಿತ್ರದ ಸಂಭಾಷಣೆಗಾಗಿ ನೀಡಿರುವ 2013ನೇ ಸಾಲಿನ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ವಿವಾವ ಪರಸ್ಪರ ಹೊಂದಾಣಿಕೆಯಲ್ಲಿ ಇತ್ಯರ್ಥಗೊಂಡಿದೆ.

ಸೋಮವಾರ ಬೆಳಗ್ಗೆ ವಾರ್ತಾಸೌಧದ ಎದುರು ಚಿತ್ರದ ನಿರ್ದೇಶಕ ನಾಗಶೇಖರ್ ಹಾಗೂ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆನ್ನಲಾದ ಮಂಜುನಾಥ್ ಸಂಜೀವ್ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾಗಿ ಪೋಸು ನೀಡಿದರು.

ಅಷ್ಟೇ ಅಲ್ಲ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಇಬ್ರ ಹೆಸರು ಹಾಕಬೇಕಿತ್ತು. ಆದ್ರೆ ಮಿಸ್ಟೇಕ್ ಆಗಿದೆ. ಈಗ ಇಬ್ರು ಸೇರಿ ಪ್ರಶಸ್ತಿ ತಗೆದುಕೊಳ್ಳುತ್ತೇವೆ. ಎನ್ನುವ ಮಾತುಗಳ ಮೂಲಕ ಹೊಂದಾಣಿಕೆಗೆ ಸಬೂಬು ನೀಡಿ ಅಚ್ಚರಿ ಮೂಡಿಸಿದರು. ಆದರೆ, ತಾವೇ ಹುಟ್ಟುಹಾಕಿದ ವಿವಾದದಿಂದಾಗಿ ಇಬ್ಬರ ನಡುವೆ ಪ್ರಶಸ್ತಿ ಹಂಚಿಕೆಯ ಬಗೆ ಹೇಗೆ, ಇದಕ್ಕೆ ಆಯ್ಕೆ ಸಮಿತಿ ಮತ್ತು ಸರ್ಕಾರದ ಪ್ರತಿಕ್ರಿಯೆ ಏನು ಎನ್ನುವ ಪ್ರಶ್ನೆಗಳು ಬಾಕಿ ಉಳಿದಿವೆ. ಈ ಮೂಲಕ ವಿವಾದ ಕುತೂಹಲ ಮೂಡಿಸಿದೆ.

ವಿವಾದದ ಹುಟ್ಟು
ಮೈನಾ ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ಈ ಚಿತ್ರದ ಸಂಭಾಷಣೆಗೆ ಈಗ 2013ನೇ ಸಾಲಿನ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ಲಭಿಸಿದೆ. ಭಾನುವಾರವಷ್ಟೇ ಪ್ರಶಸ್ತಿ ಘೋಷಣೆಯಾಗಿದೆ. ಚಿತ್ರದ ಟೈಟಲ್ ಕಾರ್ಡ್‌ನಲ್ಲಿರುವ ಮಾಹಿತಿಯಂತೆ ನಾಗಶೇಖರ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಶಸ್ತಿ ಆಯ್ಕೆಯ ಪಟ್ಟಿಯಲ್ಲಿ ನಾಗಶೇಖರ್ ಹೆಸರು ಪ್ರಕಟವಾಗಿದೆ. ಆದರೆ ಈ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಪತ್ರಕರ್ತ ಮಂಜುನಾಥ್ ಸಂಜೀವ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಮೈನಾ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ತಾವು. ಆದರೆ ಪ್ರಶಸ್ತಿ ಆಯ್ಕೆ ಸಮಿತಿ ನಾಗಶೇಖರ್ ಹೆಸರಲ್ಲಿ ಪ್ರಶಸ್ತಿ ಘೋಷಣೆ ಮಾಡಿದೆ. ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ದೂರಿದ್ದರು. ಅತ್ತ ನಾಗಶೇಖರ್ ಕೂಡ ಇದಕ್ಕೆ ಪ್ರತಿಕ್ರಿಯಿಸಿ, ಸಂಭಾಷಣೆ ಬರೆದಿದ್ದು ತಾವೇ. ಆ ಕಾರಣಕ್ಕೇ ಪ್ರಶಸ್ತಿ ಬಂದಿದೆ ಎಂದು ಸಮರ್ಥಿಸಿಕೊಂಡಿದ್ದರು. ಪ್ರಶಸ್ತಿ ಪ್ರಕಟವಾದ ಬೆನ್ನಲ್ಲೇ ಇಬ್ಬರ ನಡುವೆ ಹೀಗೆ ವಾಗ್ವಾದ ನಡೆದು, ಸಂಭಾಷಣೆಗೆ ಸಿಕ್ಕ ಪ್ರಶಸ್ತಿ ವಿವಾದಕ್ಕೊಳಗಾಗಿತ್ತು.

ಆಯ್ಕೆ ಸಮಿತಿ ಸ್ಪಷ್ಟನೆ
ಈ ಮಧ್ಯೆ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು ಪ್ರತಿಕ್ರಿಯೆ ನೀಡಿ, ಚಿತ್ರದ ಟೈಟಲ್ ಕಾರ್ಡ್‌ನಲ್ಲಿರುವ ಹೆಸರನ್ನು ಪರಿಗಣಿಸಿ ಪ್ರಶಸ್ತಿ ಪ್ರಕಟಿಸಲಾಗಿದೆ. ಅಲ್ಲಿ ಹೆಸರು ಮುಖ್ಯವಲ್ಲ. ಚಿತ್ರದ ಸಂಭಾಷಣೆ ಮುಖ್ಯ. ಯಾರಾದ್ರೂ ಪ್ರಶಸ್ತಿ ತೆಗೆದುಕೊಳ್ಳಲಿ ಎಂದು ಸ್ಪಷ್ಟನೆ ನೀಡಿದ್ದರು. ಹೀಗೆ ಭಾನುವಾರ ಪ್ರಶಸ್ತಿ ಪ್ರಕಟಗೊಂಡಾಗ ಉಂಟಾದ ವಿವಾದ ರಾತ್ರಿ ಕಳೆದು ಬೆಳಗಾಗುವುದರೊಳಗೆ ಮತ್ತೊಂದು ತಿರುವಿಗೆ ಬಂದು ಅಚ್ಚರಿ ಮೂಡಿಸಿತು.

ತಪ್ಪಾಗಿದ್ದಕ್ಕೆ ಯಾವ ಶಿಕ್ಷೆ
ಸಂಭಾಷಣೆ ಬರೆದ ಕಾರಣಕ್ಕೆ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಮಂಜುನಾಥ್ ಹೆಸರು ಬರಬೇಕಿತ್ತು. ಆದರೆ ಅದು ಅವರ ಮತ್ತು ನಾಗಶೇಖರ್ ನಡುವಿನ ಹೊಂದಾಣಿಕೆಯ ಕಾರಣ ಟೈಟಲ್ ಕಾರ್ಡ್‌ನಿಂದ ಬಿಟ್ಟು ಹೋಗಿತ್ತು. ಅದು ಮಂಜುನಾಥ್ ಅವರಿಗೂ ಗೊತ್ತಿತ್ತು. ಈಗ ಪ್ರಶಸ್ತಿ ಬಂದ ಕಾರಣಕ್ಕೇ ಮತ್ತೆ ಸುದ್ದಿಗೆ ಬಂತು. ಪ್ರಶಸ್ತಿ ಪ್ರಕಟವಾದ ತಕ್ಷಣವೇ  ಚಿತ್ರಕ್ಕೆ ತಾವೇ ಸಂಭಾಷಣೆ ಬರೆದದ್ದು ಎಂದು ಹೇಳಿಕೊಂಡ ಮಂಜುನಾಥ್ ಪ್ರಶಸ್ತಿಯನ್ನು ತಾವೇ ಸ್ವೀಕರಿಸುವ ತನಕ ಅದನ್ನೇ ವಾದಿಸಬೇಕಿತ್ತು. ಆದರೆ ವಿವಾದ ಹುಟ್ಟು ಹಾಕಿ, ರಾತ್ರೋರಾತ್ರಿ ಹೊಂದಾಣಿಕೆಗೆ ಶರಣಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ.

ಜತಗೆ, ಸಂಭಾಷಣೆ ಬರೆದವರ ಹೆಸರನ್ನು ಟೈಟಲ್ ಕಾರ್ಡ್‌ನಲ್ಲಿ ಹಾಕದೆ, ಪ್ರಶಸ್ತಿ ಆಯ್ಕೆ ಸಮಿತಿಯನ್ನು ತಪ್ಪುದಾರಿಗೆ ಎಳೆಯಲಾಗಿದೆ. ಇನ್ನೊಂದೆಡೆ ನಿಜವಾದ  ಬರಹಗಾರನಿಗೂ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಪ್ರಶಸ್ತಿ ಆಯ್ಕೆ ಸಮಿತಿ ಮತ್ತು ವಾರ್ತಾ ಇಲಾಖೆ ಯಾವ ಕ್ರಮ ಜರುಗಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇಷ್ಟಾಗಿಯೂ ಪ್ರಶಸ್ತಿ ಹಂಚಿಕೊಳ್ಳುವ, ಮತ್ತೊಬ್ಬರ ಶ್ರಮಕ್ಕೆ ಇನ್ನೊಬ್ಬರು ಪ್ರಶಸ್ತಿ ಪಡೆಯುವ ಕ್ರಮ ಎಷ್ಟು ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com