ಅನಂತ್- ರಕ್ಷಿತ್ ಕಣ್ಣಾಮುಚ್ಚಾಲೆ

ಕಾಣೆಯಾದವರ ಬಗ್ಗೆ ಪ್ರಕಟಣೆ: ವೆಂಕೋಬರಾವ್ ಎಂಬ ಅರವತ್ತಾರು ವರ್ಷದ ವ್ಯಕ್ತಿ ದಿನಾಂಕ 18-10-2014ರಿಂದ ಬೆಂಗಳೂರಿನ ಬಸವನಗುಡಿಯಿಂದ ಕಾಣೆಯಾಗಿದ್ದಾರೆ. ಗೋಧಿ ಮೈ ಬಣ್ಣ ಸಾಧಾರಣ ಮೈಕಟ್ಟು...
ಅನಂತ್ ನಾಗ್ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ ಪ್ಲಸ್ ಚಿತ್ರದ (ಸಂಗ್ರಹ ಚಿತ್ರ)
ಅನಂತ್ ನಾಗ್ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ ಪ್ಲಸ್ ಚಿತ್ರದ (ಸಂಗ್ರಹ ಚಿತ್ರ)

ಕಾಣೆಯಾದವರ ಬಗ್ಗೆ ಪ್ರಕಟಣೆ: ವೆಂಕೋಬರಾವ್ ಎಂಬ ಅರವತ್ತಾರು ವರ್ಷದ ವ್ಯಕ್ತಿ ದಿನಾಂಕ 18-10-2014ರಿಂದ ಬೆಂಗಳೂರಿನ ಬಸವನಗುಡಿಯಿಂದ ಕಾಣೆಯಾಗಿದ್ದಾರೆ. ಗೋಧಿ ಮೈ ಬಣ್ಣ ಸಾಧಾರಣ ಮೈಕಟ್ಟು...

ಇದು ನಿನ್ನೆಯಷ್ಟೇ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿರುವ ಪ್ರಕಟಣೆ. ಇದನ್ನು ಸಿನಿಮಾ ಭಾಷೆಯಲ್ಲಿ ಟ್ರೇಲರ್ ಅಂದರೂ ತಪ್ಪಿಲ್ಲ. ಸೆಪ್ಟೆಂಬರ್‍ನಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಎಂಬ ವಿಕ್ಷಿಪ್ತ ಹೆಸರಿನ ಸಿನಿಮಾ ಅನೌನ್ಸ್ ಆಗಿದ್ದು ನೆನಪಿದೆಯಾ? ಅನಂತ್‍ನಾಗ್ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಷನ್ ಸಿನಿಮಾ ಅಂತ ಸುದ್ದಿಯಾಗಿದ್ದು ನೆನಪಿದೆಯಾ?

ಅನಂತರ ಆ ಚಿತ್ರ ಆ ನಂತರ ಎಲ್ಲಿ ಕಾಣೆಯಾಯ್ತು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಉತ್ತರವಾಗಿ ನಿನ್ನೆಯಷ್ಟೇ ಚಿತ್ರದ ಫರ್ಸ್ಟ್ ಲುಕ್ ಪ್ರತ್ಯಕ್ಷವಾಗಿದೆ. ಸದ್ದಿಲ್ಲದೆ ಬಿಡುಗಡೆಯಾದರೂ ಅರ್ಧದಿನದಲ್ಲಿ ಒಂದೂವರೆ ಸಾವಿರ ಹಿಟ್ಸ್ ಪಡೆದುಕೊಂಡಿದೆ. ಅನಂತ್‍ನಾಗ್ ಮತ್ತು ರಕ್ಷಿತ್ ತಂದೆ-ಮಗನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ  ಕಾಣೆಯಾದ ತಂದೆಯನ್ನು ಮಗ ಹುಡುಕುವ ಕಥೆಯಿದೆಯಾ ಎಂಬ ಸೂಚನೆಯನ್ನು ಪ್ರೊಮೋ ನೀಡುತ್ತಿದೆ.

ಆದರೆ ಮುಹೂರ್ತದ ದಿನ ಮಾತನಾಡಿರುವ ಅನಂತ್‍ನಾಗ್ ಮಾತ್ರ ಇವರಿಗೆ ನಿಜಕ್ಕೂ ಅರವತ್ತಾರು ವರ್ಷವಾ ಎಂಬಂತೆ ಕಪ್ಪುಕೇಶದಲ್ಲಿ ಕಂಗೊಳಿಸುತ್ತಿದ್ದಾರೆ.  ಹುಡುಕುತ್ತಿರುವವರಿಗೆ ಗುರುತು ಸಿಗದಿರಲಿ ಎಂಬ ಇರಾದೆ ಇದ್ದೀತಾ! ಇತ್ತೀಚೆಗೆ ಪ್ಲಸ್ ಸಿನಿಮಾದ ಫೋಟೋಶೂಟ್‍ಗಳಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದ ಅನಂತ್, ಈ ಚಿತ್ರದ ಫಸ್ಟ್ ಲುಕ್‍ನಲ್ಲೂ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಅನಂತ್‍ನಾಗ್ ಗೆ ಖುಷಿ ಕೊಟ್ಟಿದೆ ಅನ್ನೋದಕ್ಕೆ ಅವರು ಮಾಧ್ಯಮದೊಂದಿಗೆ ಮಾತನಾಡಿರುವುದೇ ಸಾಕ್ಷಿ.

ಮಾಮೂಲಾಗಿ ತಾವು ನಟಿಸೋ ಯುವ ಚಿತ್ರದ ಅನಾವಶ್ಯಕವಾಗಿ ಹೊಗಳದ ಅವರು, ಈ ಚಿತ್ರದ ಬಗ್ಗೆ ಅತ್ಯಂತ ಭರವಸೆಯ ಮಾತುಗಳನ್ನಾಡಿದ್ದಾರೆ. ಈ ಹದಿನೈದು ವರ್ಷಗಳಲ್ಲಿ ತಾವು ಕೇಳಿದ ಅತ್ಯುತ್ತಮ ಸ್ಕ್ರಿಪ್ಟ್ ಇದೆಂದು ನೇರವಾಗಿ ಹೊಗಳಿರುವ ಅನಂತ್, ನಿರ್ದೇಶಕ ಹೇಮಂತ್ ಕನ್ನಡ ಚಿತ್ರರಂಗದ ಭರವಸೆಯ ತಂತ್ರಜ್ಞ ಎಂದು ಸರ್ಟಿಫೈ ಮಾಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ. ಇತ್ತೀಚಿನ ದಿನಗಳಲ್ಲಿ ಭಾರತದ ಯಾವ ಭಾಷೆಯಲ್ಲೂ ಇಂಥ ಅಪರೂಪದ ಸಬ್ಜೆಕ್ಟ್ ಬಂದಿಲ್ಲ ಎಂದು ಸ್ಕ್ರಿಪ್ಟ್ ಬಗ್ಗೆ ಥ್ರಿಲ್ ಗಿ ಮಾತನಾಡಿರುವ ಅನಂತ್‍ನಾಗ್, ರಕ್ಷಿತ್ ಅನಂತ್-ರಕ್ಷಿತ್ ಕಣ್ಣಾಮುಚ್ಚಾಲೆ ಶೆಟ್ಟಿ ಜೊತೆ ನಟಿಸುತ್ತಿರುವ ಬಗ್ಗೆ ಕೂಡ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿಗೆ ಹೊಸಥರದ ಚಿತ್ರಗಳೇ ತಮ್ಮನ್ನು ಹುಡುಕಿಕೊಂಡು ಬರುತ್ತಿರುವ ಬಗ್ಗೆ ಖುಷಿ. ಅಪರೂಪದ ಕಥೆಯನ್ನು ಕಮರ್ಷಿಯಲ್ಲಾಗಿ ಹೇಳುವ ಪ್ರಯತ್ನ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿ ಆಗಿದೆ ಎಂಬುದು ರಕ್ಷಿತ್ ಮಾತು. ಮಿಕ್ಕಂತೆ ಚಿತ್ರದಲ್ಲಿ ಶ್ರುತಿ ಹರಿಹರನ್ ಅಚ್ಯುತ್ ಮುಂತಾದ ಸದ್ಯದ ಬ್ಯುಸಿ ಕಲಾವಿದರ ದಂಡೇ ಇದೆ. ಸದ್ಯಕ್ಕೆ ಸುದ್ದಿ ಇಷ್ಟೇ. ಕಾಣೆಯಾಗಿರುವ ವೆಂಕೋಬರಾವ್ ನಿಮಗೆ ಕಂಡಲ್ಲಿ ರಕ್ಷಿತ್ ಶೆಟ್ಟಿಯವರಿಗೆ ಸುಳಿವು ನೀಡಬಹುದು. ಆದರೆ ಹುಡುಕಿಕೊಟ್ಟವರಿಗೆ ಬಹುಮಾನವೇನಾದರೂ ಇದೆಯಾ ಎಂಬುದನ್ನು ಮಾತ್ರ ಚಿತ್ರತಂಡ ಪ್ರಕಟಿಸಿಲ್ಲ!

ಪ್ಲಸ್ ಚಿತ್ರದ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com