
ಬೆಂಗಳೂರು: ರಿಮೇಕ್ ಚಲನಚಿತ್ರ 'ರನ್ನ' ಸಿನೆಮಾದ ಕಲಾವಿದರು ಮತ್ತು ತಾಂತ್ರಿಕ ವರ್ಗದವರ ಭತ್ಯೆಯನ್ನು ನೀಡದೆ ನಿರ್ಮಾಪಕ ಎಂ ಚಂದ್ರಶೇಖರ್ ತಡಮಾಡುತ್ತಿರುವುದು ನಟ ಸುದೀಪ್ ಅವರಿಗೆ ಬೇಸರ ತಂದಿದೆಯಂತೆ.
ನಿರ್ದೇಶಕ ನಂದ ಕಿಶೋರ್, ನಟರಾದ ಸಾಧು ಕೋಕಿಲಾ, ಚಿಕ್ಕಣ್ಣ, ನೃತ್ಯನಿರ್ದೇಶಕ ಸುಧಾಕರ್ ರಾಜ್ ಇವರುಗಳನ್ನು ಒಳಗೊಂಡಂತೆ ಸುದೀಪ್ ಅವರಿಗೂ ಹಣ ನೀಡದೆ ನಿರ್ಮಾಪಕ ಸತಾಯಿಸುತ್ತಿದ್ದಾರಂತೆ.
ನಟ ಸುದೀಪ್ ಅವರ ಕೋರಿಕೆ ಮೇರೆಗೆ ಸುಮಾರು ಜನ ಈ ಸಿನೆಮಾಗೆ ಕೆಲಸ ಮಾಡಿದ್ದು, ಈಗ ಅವರಿಗೆ ಹಣ ಕೊಡಿಸುವ ಭಾರ ಸುದೀಪ್ ಅವರ ಮೇಲೆ ಬಿದ್ದಿದೆ.
ಈಗ್ಗೆ ೧೫ ದಿನಗಳ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಗೆ ತೆರಳಿ ಈ ತೊಂದರೆ ನೊವಾರಿಸುವಂತೆ ಕೇಳಿಕೊಂಡಿದ್ದಾರೆ.
ನಿರ್ಮಾಪಕರನ್ನು ಸಂಪರ್ಕಿಸಿದಾಗ ಇನ್ನು ಕೆಲವು ವಾರಗಳಲ್ಲಿ ಹಣ ನೀಡುವುದಾಗಿ ಹೇಳಿದ್ದಾರೆ. "ಸುದೀಪ್ ನನ್ನ ಮೇಲೆ ಬೇಸರ ಮಾಡಿಕೊಂಡಿರುವುದು ಕೇಳಿ ದುಃಖವಾಯಿತು. ಆದರೆ ಈಗ ಸದ್ಯಕ್ಕೆ ಎಲ್ಲಾ ತೆರಿಗೆ ವಿಷಯಗಳನ್ನು ಬಗೆಹರಿಸಿಕೊಳ್ಳಬೇಕಿದೆ, ನಂತರ ಎಲ್ಲರಿಗೂ ಅವರ ಪಾಲು ನೀಡಲಾಗುವುದು. ನಾನು ಸುದೀಪ್ ಅವರನ್ನು ಭೇಟಿ ಮಾಡಿ ಕ್ಷಮೆ ಕೋರಿದ್ದೇನೆ. ಅವರಿಂದಲೇ ಈ ಸಿನೆಮಾ ಬಿಡುಗಡೆ ಸಾಧ್ಯವಾದದ್ದು" ಎಂದು ಚಂದ್ರಶೇಖರ್ ಹೇಳಿದ್ದಾರೆ.
ಈಗ ರನ್ನ ಪ್ರದರ್ಶನ ೫೦ ದಿನ ಪೂರೈಸಿದ್ದು, ನರ್ತಕಿ ಸಿನೆಮಾ ಮಂದಿರದಿಂದ ಸಪ್ನಾ ಸಿನೆಮಾಮಂದಿರಕ್ಕೆ ಎತ್ತಂಗಡಿ ಆಗಲಿದೆಯಂತೆ. ಹುಬ್ಬಳ್ಳಿ ಮತ್ತಿತರ ಜಿಲ್ಲೆಗಳಲ್ಲಿ ಕೂಡ ಸಿನೆಮಾ ಒಳ್ಳೆಯ ಗಳಿಕೆ ಕಂಡಿದೆ ಎಂದು ತಿಳಿದುಬಂದಿದೆ.
Advertisement