ಬೆಂಗಳೂರು: 'ರನ್ನ'ನ ತೊಂದರೆಗಳು ಕೊನೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಹಲವಾರು ಅಡೆತಡೆಗಳ ನಂತರ ಈಗ ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆಗೆ ಸಿದ್ಧವಿದ್ದರು ಹೊಸ ಸಮಸ್ಯೆಯೊಂದು ಸುದೀಪ್ ನಟನೆಯ ಈ ಚಿತ್ರಕ್ಕೆ ಸುತ್ತಿಕೊಂಡಿದೆ. ಮಾರ್ಚ್ ನ ಚಿತ್ರೀಕರಣ ವೇಳೆಯಲ್ಲಿ ಹೆಸರಘಟ್ಟ ಕೆರೆಯನ್ನು ಕಲುಷಿತ ಮಾಡಿದ ಆರೋಪ ರನ್ನ ಚಿತ್ರತಂಡದ ಮೇಲೆ ಕೇಳಿ ಬಂದಿತ್ತು. ಹೆಸರಘಟ್ಟದ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಕೆ ಕೆರೆ ನಿರ್ವಹಣಾ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈಗ ಈ ದೂರು ಮಾಲಿನ್ಯ ನಿಯಂತ್ರಣ ಮಂಡಲಿಗೆ ತಲುಪಿದೆ.
ನಿರ್ದೇಶಕ ನಂದ ಕಿಶೋರ್ ಹೇಳುವಂತೆ ಈ ಪ್ರಕರಣ ಶೀಘ್ರವೇ ಬಗೆಹರಿಯಲಿದೆಯಂತೆ. "ನಮ್ಮ ನಿರ್ಮಾಪಕರು ಮಾಲಿನ್ಯ ನಿಯಂತ್ರಣ ಮಂಡಲಿಯ ಜೊತೆ ಮಾತನಾಡಿದ್ದಾರೆ. ಈ ಪ್ರಕರಣಕ್ಕೆ ಶೀಘ್ರವೇ ಇತಿಶ್ರೀ ಹಾಡಲಿದ್ದೇವೆ. ಹೆಸರಘಟ್ಟದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಮೀನುಗಾರಿಕಾ ಮಂಡಲಿ ನಮಗೆ ಪರವಾನಗಿ ಪತ್ರ ನೀಡಿದ್ದಾರೆ. ಈ ಪ್ರಕರಣ ತಾರಕ್ಕೇರಿದರು ಬಹುಶಃ ಮಾಲಿನ್ಯ ನಿಯಂತ್ರಣ ಮಂಡಲಿ ನಮಗೆ ದಂಡ ಹಾಕಬಹುದು. ಆದರೆ ಇದು ಬಿಡುಗಡೆಗೆ ಯಾವುದೇ ಅಡ್ಡಿ ಮಾಡುವುದಿಲ್ಲ" ಎಂದಿದ್ದಾರೆ. "ನಾವು ಕೆರೆಯನ್ನು ಮರುನಿರ್ಮಿಸಲು ಯಾವುದೇ ರಾಸಾಯನಿಕ ಬಣ್ಣವನ್ನು ಬಳಸಿಲ್ಲ. ಅವೆಲ್ಲವೂ ತರಕಾರಿಗಳಿಂದ ಉತ್ಪಾದಿಸಿದ ಬಣ್ಣಗಳು. ನೀರನ್ನು ಕೂಡ ನಾವು ಕೆರೆಯಿಂದ ಎತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಲಿಗೆ ನಾವು ಸ್ಪಷ್ಟೀಕರಣ ನೀಡೀದ್ದೇವೆ" ಎಂದು ಕೂಡ ಅವರು ತಿಳಿಸಿದ್ದಾರೆ.
ಮಂಜುನಾಥ್ ಅವರು ನಮ್ಮ ಸಿನೆಮಾವನ್ನು ಉಪಯೋಗಿಸಿಕೊಂಡು ದುಡ್ಡು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೂಡ ನಂದಕಿಶೋರ್ ಆರೋಪಿಸಿದ್ದಾರೆ. "ಚಿತ್ರೀಕರಣದ ವೇಳೆಯಲ್ಲೂ ಅವರು ಸುದೀಪ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರು. ಅದಕ್ಕೆ ನಾವು ಅವಕಾಶ ಮಾಡಿಕೊಡಲಿಲ್ಲ. ಇದನ್ನು ಅವರು ಅತಿ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಹಾಗೆಯೇ ಅವರ ಸಮ್ಮುಖದಲ್ಲೇ ಇದನ್ನು ವಾಣಿಜ್ಯ ಮಂಡಲಿಯ ಅಧಿಕಾರಿಗಳ ಎದುರು ವಿವರಿಸಿದ್ದೇವೆ. ಹೀಗಿದ್ದರೂ ಅವರು ಇದನ್ನು ಅಷ್ಟಕ್ಕೇ ಬಿಡುತ್ತಿಲ್ಲ. ಆಘಾತಕಾರಿ ಎಂದರೆ ಹೆಸರಘಟ್ಟದ ಜನ ಮಂಜುನಾಥ್ ನಮ್ಮ ಊರಿನವರೇ ಅಲ್ಲ ಎನ್ನುತ್ತಾರೆ" ಎಂದಿದ್ದಾರೆ ಕಿಶೋರ್.
ಸುದೀಪ್, ಮಧೂ, ರಚಿತಾ ರಾಮ್, ಹರಿಪ್ರಿಯಾ, ಪ್ರಕಾಶ್ ರಾಜ್, ಚಿಕ್ಕಣ್ಣ, ತಬಲಾ ನಾಣಿ ಮುಂತಾದವರು ಅಭಿನಯಿಸಿರುವ ಈ ಚಿತ್ರ ಜೂನ್ ೪ ಕ್ಕೆ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.
Advertisement