
ತಮ್ಮದು ಪಕ್ಕಾ ಕಮರ್ಷಿಯಲ್ ಚಿತ್ರ ಆದರೆ ಸಮಾಜಕ್ಕೊಂದು ಮೆಸೇಜ್ ಇದೆ ಅಂತಿದೆ ಇಲ್ಲೊಂದು ಸಾಫ್ಟ್ ವೇರ್ ಟೆಕ್ಕೀ ಟೀಮ್. ಮಲ್ಟಿಪ್ಲೆಕ್ಸಿನಲ್ಲಿ ಈಗಾಗಲೇ ಬಿಡುಗಡೆಯಾಗಿರುವ, ಈ ಟೆಕ್ಕೀ ಚಿತ್ರದ ಹೆಸರು ಎ ಡೇ ಇನ್ ದ ಸಿಟಿ. ಕನ್ನಡಿಗರಿಗಾಗಿ ನಗರದಲ್ಲಿ ಒಂದು ದಿನ ಎಂಬ ಹೆಸರನ್ನೂ ತೋರಿಸುತ್ತದೆ ಚಿತ್ರ.
ಸಾಫ್ಟ್ ವೇರ್ ಉದ್ಯೋಗಿಗಳು ಮಾಮೂಲಾಗಿ ವೀಕೆಂಡನ್ನು ಟ್ರಿಪ್ಪು, ಪಾರ್ಟಿಗಳಲ್ಲಿ ಕಳೆಯುತ್ತಾರೆ. ಅಥವಾ ಸಿನಿಮಾ ನೋಡಿ ಕಳೆಯುತ್ತಾರೆ. ಆದರೆ ಇಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ವೀಕೆಂಡನ್ನು ಸಿನಿಮಾ ಮಾಡಲು ವಿನಿಯೋಗಿಸಿದ್ದಾರೆ. ಆರು ತಿಂಗಳು ಪ್ರತಿ ವೀಕೆಂಡಲ್ಲೂ ಕೂತು ಕಥೆ ಚಿತ್ರಕಥೆ ಸಂಭಾಷಣೆ ಬರೆದು ತಿದ್ದಿ ತೀಡುವುದರಲ್ಲಿ ಕಳೆದ ತಂಡ ಆ ನಂತರ ಮೂರು ತಿಂಗಳು ಚಿತ್ರೀಕರಣ ನಡೆಸಿದೆ. ಇದು ಇಡೀ ತಂಡಕ್ಕೆ ಚೊಚ್ಚಲ ಪ್ರಯತ್ನವಾದರೂ ಕೂಡ, ಇವರ್ಯಾರೂ ಫುಲ್ ಟೈಮ್ ಸಿನಿಮಾದಲ್ಲಿ ತೊಡಗಿಕೊಂಡವರಲ್ಲವಾದರೂ, ಸಿನಿಮಾ ಮಾತ್ರ ಅನುಭವಿಗಳೇ ಮಾಡಿದ್ದಾರೆ ಅನ್ನುವ ಮಟ್ಟಿಗೆ ಮಾಡಿದ್ದಾರೆಂಬುದು ಈಗಾಗಲೇ ಸಿನಿಮಾ ನೋಡಿದವರ ಮಾತು.
ವಿಶೇಷವೆಂದರೆ, ತಮ್ಮದು ಮಲ್ಟಿಪ್ಲೆಕ್ಸ್ ಸಿನಿಮಾ ಎಂದು ತಾವೇ ಘೋಷಿಸಿಕೊಂಡು ಗಾಂಧಿನಗರ ಹಾಗೂ ಇತರೇ ಸಿಂಗಲ್ ಥೇಟರುಗಳಿಂದ ದೂರ ಉಳಿದುಕೊಂಡಿದ್ದಾರೆ ಈ ಉತ್ಸಾಹಿಗಳು. ಈ ನಡುವೆ ಗಾಂಧಿನಗರದಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗದೇ ಮಲ್ಟಿಪ್ಲೆಕ್ಸುಗಳಲ್ಲಿ ಬಿಡುಗಡೆ ಮಾಡಿದ್ದಾರೆ ಎಂಬ ಮಾತೂ ಕೇಳಿಬಂದಿದೆ. ಚಿತ್ರದಲ್ಲಿ ಒಟ್ಟು ನಲವತ್ತೈದು ಪಾತ್ರಗಳಿದ್ದು, ಯಾರೊಬ್ಬರೂ ಇದೇ ಮೊದಲು ಕ್ಯಾಮೆರಾ ಎದುರಿಸಿದ್ದು ಅನಿಸದ ಹಾಗೆ ನಟಿಸಿದ್ದಾರೆ ಎಂಬುದು ಚಿತ್ರದ ಬಗ್ಗೆ ಬಂದ ಪ್ರೇಕ್ಷಕವಿಮರ್ಶೆ. ಹೊಸಬರೊಂದಿಗೆ ಕಪ್ಪಣ್ಣ ಮುಂತಾದ ಅನುಭವಿ ರಂಗಪ್ರತಿಭೆಗಳೂ ತೆರೆ ಹಂಚಿಕೊಂಡಿದ್ದಾರಂತೆ. ಥ್ರಿಲ್ಲರ್ ಮಾದರಿಯ ಸಿನಿಮಾ ಇದಾಗಿದ್ದು, ದೇಶದ ಮಹಾನಗರದಲ್ಲಿ ನಡೆಯುವ ಘಟನೆಯೊಂದರಿಂದಾಗಿ ಸಾಮಾನ್ಯ ಪ್ರಜೆ ಹೇಗೆ ತೊಂದರೆಗೊಳಾಗುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಭಾವೈಕ್ಯತೆ ಮುಂತಾದ ವಿಷಯಗಳನ್ನೂ ಚಿತ್ರದಲ್ಲಿ ಹೇಳಲಾಗಿದ್ದು, ಚಿತ್ರದಲ್ಲಿ ಪ್ರಜೆಗಳಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ಸಂದೇಶವಿದೆಯಂತೆ. ಚಿತ್ರಕ್ಕೆ ವೆಂಕಟ್ ಭಾರದ್ವಾಜ್ ನಿರ್ದೇಶನವಿದ್ದು, ಲಕ್ಷ್ಮಣ್ ಶಿವಶಂಕರ್, ಮನೋಹರ್ ರಾಮ್ ಕುಮಾರ್ ಮುಂತಾದ ಉತ್ಸಾಹಿ ಹೊಸಬರು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರದ ಅವಧಿ ಒಟ್ಟು 125 ನಿಮಿಷ.
Advertisement