ಲೂಸ್ ಬಜಾರ್

ಲೂಸ್‍ಮಾದ ಅಲಿಯಾಸ್ ಯೋಗೀಶ್ ಎಲ್ಲಿ ಹೋಗಿದ್ದಾರೆ? ಇಂದು `ಯಕ್ಷ ಪ್ರಶ್ನೆಯಾಗಿ ಕಾಡದಿದ್ದರೂ ಲೂಸ್‍ಮಾದ ಹಿಂದಿನಂತೆ ಈಗ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ..
ಲೂಸ್ ಮಾದ ಯೋಗೀಶ್ (ಸಂಗ್ರಹ ಚಿತ್ರ)
ಲೂಸ್ ಮಾದ ಯೋಗೀಶ್ (ಸಂಗ್ರಹ ಚಿತ್ರ)

ಲೂಸ್‍ಮಾದ ಅಲಿಯಾಸ್ ಯೋಗೀಶ್ ಎಲ್ಲಿ ಹೋಗಿದ್ದಾರೆ? ಇಂದು `ಯಕ್ಷ ಪ್ರಶ್ನೆಯಾಗಿ ಕಾಡದಿದ್ದರೂ ಲೂಸ್‍ಮಾದ ಹಿಂದಿನಂತೆ ಈಗ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ಮಾತ್ರ ಸತ್ಯ ಎಂದುಕೊಳ್ಳುವಾಗಲೇ ಅವರು `ಬಜಾರ್' ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಸಿಂಪಲ್ ಸುನಿ ತಂಡದಲ್ಲಿ ಗುರುತಿಸಿಕೊಂಡಿದ್ದ ಹರೀಶ್, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ `ಬಜಾರ್' ಚಿತ್ರಕ್ಕೆ, ನಟ ಯೋಗೀಶ್ ನಾಯಕ. ಅಂದಹಾಗೆ ಈ ಜಾಗದಲ್ಲಿ `ಗೊಂಬೆಗಳ ಲವ್' ಚಿತ್ರದ ಅರುಣ್ ಇದ್ದರು. ಆದರೆ  ಕೆಲವು ಬದಲಾವಣೆಗಳಿಂದ ಅರುಣ್ ಜಾಗಕ್ಕೆ ಯೋಗೀಶ್ ಬಂದಿದ್ದಾರೆ ಎನ್ನುವುದು `ಬಜಾರ್' ಚಿತ್ರದ ಲೇಟೆಸ್ಟ್ ಸುದ್ದಿ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿರುವ ಈ ಚಿತ್ರವನ್ನು ನಿರ್ದೇಶಕ ಹರೀಶ್ ಆಂಡ್ ಟೀಮ್ ಸೇರಿ ನಿರ್ಮಾಣ ಮಾಡುತ್ತಿದೆ. ಹೀಗಾಗಿ ಇದು ಗೆಳೆಯರೇ ಸೇರಿ ಮಾಡುತ್ತಿರುವ ಗೆಳೆಯರ ಸಿನಿಮಾ ಎನ್ನಬಹುದು.
 
ಮೇಘನಾ ಗಾಂವ್ಕರ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನೂ ದರ್ಶನ್ ಕನಕ ಕ್ಯಾಮೆರಾ ಹಿಡಿಯಲಿದ್ದಾರೆ. `ಬಜಾರ್ ಸಿನಿಮಾಗೆ ಯೋಗಿ ಸೂಕ್ತ ಅನಿಸಿತು. ಹೀಗಾಗಿ ಅವರನ್ನೇ ಈ ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ' ಎಂಬುದು ಚಿತ್ರತಂಡದ ಅಭಿಪ್ರಾಯ. ಈ ನಡುವೆ ಸುಮನಾ ಕಿತ್ತೂರು ನಿರ್ದೇಶನದ `ಕಿರುಗೂರಿನ ಗಯ್ಯಾಳಿಗಳು' ಚಿತ್ರದಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದು, ಮನೋಹರ್ ಜೋಷಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.

ಮನೋಹರ್ ಅವರಿಗೆ ಇದು 10ನೇ ಸಿನಿಮಾ. ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆ. ನಟಿ ಸುಕೃತಾ ವಾಗ್ಲೆ, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಸೋನು ಗೌಡ, ಶ್ವೇತಾ ಶ್ರೀವಾಸ್ತವ್, ಕಿಶೋರ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಇವರ ಜತೆ ನಟ ಯೋಗೀಶ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. `ಕಿರಗೂರಿನ ಗಯ್ಯಾಳಿಗಳು ಒಂದು ಅದ್ಭುತ ಕಥೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನ ಸಿನಿಮಾ ಮಾಡಬೇಕು ಎಂದುಕೊಂಡಾಗಲೇ ಒಂದಿಷ್ಟು ಸವಾಲುಗಳು ನಮ್ಮ ಮುಂದೆ ಇದ್ದರೂ ಇದು ಒಳ್ಳೆಯ ಸಿನಿಮಾ ಆಗುತ್ತದೆಂಬ ನಂಬಿಕೆ ಇತ್ತು. ಆ ವಿಶ್ವಾಸದಿಂದಲೇ ಈ ಕಥೆಯನ್ನು ಚಿತ್ರ ಮಾಡುತ್ತಿದ್ದೇನೆ.

ಚಿತ್ರಕ್ಕೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವಾಗ ಪ್ರತಿ ಪಾತ್ರಕ್ಕೆ ಯಾರು ಸೂಕ್ತ ಎಂದು ನೋಡಿಕೊಂಡೇ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಹಾಗೆ ನಟ ಯೋಗೀಶ್ ಕೂಡ ಚಿತ್ರದ ಒಂದು ಮುಖ್ಯ ಪಾತ್ರಕ್ಕೆ ಅಗತ್ಯವಿತ್ತು. ಹೀಗಾಗಿ ಯೋಗಿ ಅವರನ್ನು ಕೇಳಿದಾಕ್ಷಣ ಏನೂ ಕೇಳದೆ ಒಪ್ಪಿಕೊಂಡಿದ್ದಾರೆ. ಅವರು ಚಿತ್ರದಲ್ಲಿ ನಾನು ಅಂದುಕೊಂಡಿರುವ ಪಾತ್ರಕ್ಕೆ ತುಂಬಾ ಸೂಕ್ತ' ಎನ್ನುತ್ತಾರೆ ನಿರ್ದೇಶಕಿ ಸುಮನಾ ಕಿತ್ತೂರು. ಬರವಣಿಗೆಯಲ್ಲಿ ಸಾಕಷ್ಟು ಪಳಗಿರುವ ಸುಮನಾ ಕಿತ್ತೂರು ಅವರ ನಿರ್ದೇಶನದ ಬಗ್ಗೆ ಹೆಚ್ಚು ಹೇಳುವಂತಿಲ್ಲ. `ಕಳ್ಳರ ಸಂತೆ', `ಸ್ಲಂಬಾಲ' ಹಾಗೂ `ಎದೆಗಾರಿಕೆ' ಚಿತ್ರಗಳ ಮೂಲಕ ತಮ್ಮ  ನಿರ್ದೇಶನದ ಪ್ರತಿಭೆಯನ್ನು ತೋರಿಸಿಕೊಟ್ಟವರು. ಅಲ್ಲದೆ ಅಗ್ನಿ ಶ್ರೀಧರ್ ಅವರು `ಕಿರಗೂರಿನ ಗಯ್ಯಾಳಿಗಳು' ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿರುವುದರಿಂದ ಸುಮನಾ ಅವರಿಗೆ ಬೆಟ್ಟದಷ್ಟು ಬಲ ದಕ್ಕಿದಂತಾಗಿದ್ದು, ಇಡೀ ಚಿತ್ರವನ್ನು ಕಮರ್ಷಿಯಲ್‍ನಲ್ಲಿ ಕಟ್ಟಿಕೊಡುವ ಕೆಲಸ ಸುಮನಾ ಅವರ ಮುಂದೆ. ಹೀಗಾಗಿ ಕಲಾವಿದರ ಆಯ್ಕೆಯಿಂದಲೇ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದು, ಈಗಾಗಲೇ ಗುರುತಿಸಿಕೊಂಡಿರುವ ಕಲಾವಿದರನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಟ ಯೋಗೀಶ್ ಪಾತ್ರ ಮಾಡುವ ಮೂಲಕ ಅವರ ಕೆರಿಯರ್‍ನಲ್ಲಿ ಮತ್ತೊಂದು ಹೊಸ ರೀತಿಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕಮರ್ಷಿಯಲ್ ಹೀರೋ ಆಗಿದ್ದರೂ `ಮತ್ತೆ ಸತ್ಯಾಗ್ರಹ' ಎನ್ನುವ ಚಿತ್ರದಲ್ಲಿ ಅಬಿsನಯಿಸಿದ ಯೋಗೀಶ್, ಲೇಖಕಿ ಪ್ರತಿಭಾ ನಂದಕುಮಾರ್ ನಿರ್ದೇಶನದ `ಸ್ನೇಕ್‍ನಾಗ' ಚಿತ್ರಕ್ಕೂ ನಾಯಕನಾಗಿದ್ದು, ಈ ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ. ಒಟ್ಟಿನಲ್ಲಿ ಕೈಯಲ್ಲೊಂದಿಷ್ಟು ಸಿನಿಮಾಗಳಿದ್ದರೂ ಎಲ್ಲೂ ಹೆಚ್ಚು ಸದ್ದು ಮಾಡದ ಯೋಗೀಶ್, ಕಿರುತೆರೆ ಪ್ರೇಕ್ಷಕರಿಗೆ ಮಾತ್ರ ರಾತ್ರಿಯಾಗುತ್ತಿದಂತೆಯೇ `ಲೈಫ್ ಸೂಪರ್ ಗುರೂ' ಎನ್ನುತ್ತಿದ್ದರು. ಅದು ಕೂಡ ಮುಗಿದಿದ್ದು, ಮತ್ತೆ ಈ ಹೊಸ ಚಿತ್ರಗಳ ಮೂಲಕ ಎಂದಿನಂತೆ ಬಿಗ್ ಸ್ಕ್ರೀನ್‍ನಲ್ಲಿ ಯೋಗಿ ಅಬ್ಬರ ಮಾಡಲಿದ್ದಾರೆಯೇ..?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com