
ಬೆಂಗಳೂರು: ಹಲವಾರು ವಿವಾದಗಳಿಂದ ನವೆಂಬರ್ ೨೦೧೨ಕ್ಕೆ ಸೆಟ್ಟೇರಿ, ನಿಂತುಹೋಗಿದ್ದ ನೀರ್ ದೋಸೆಗೆ ಈಗ ಮತ್ತೆ ಜೀವ ಬಂದಿದೆ. ಇನ್ನೇನು ನೆಗೆಗುದಿಗೆ ಬಿದ್ದಿತು ಎಂದೇ ನಂಬಿದ್ದ ಈ ಸಿನೆಮಾ ಈಗ ನಟಿ ಮತ್ತು ನಿರ್ಮಾಪಕರ ಬದಲಾವಣೆಯೊಂದಿಗೆ ಪ್ರೇಕ್ಷಕರನ್ನು ತಣಿಸಲು ಶೀಘ್ರದಲ್ಲೆ ಬರಲಿದೆ. ಆಶು ಬೆದ್ರ ಈಗ ಚಿತ್ರದ ಹೊಸ ನಿರ್ಮಾಪಕರು.
ಸಿದ್ಲಿಂಗು ಚಲನಚಿತ್ರದ ಭರ್ಜರಿ ಯಶಸ್ಸಿನ ನಂತರ ಬಹುತೇಕ ಅದೇ ಚಿತ್ರ ತಂಡದೊಂದಿಗೆ ನೀರ್ ದೋಸೆ ಸಿನೆಮಾವನ್ನು ನಿದೇಶಕ ವಿಜಯ್ ಪ್ರಸಾದ್ ಘೋಷಿಸಿದ್ದರು. ಸಿನೆಮಾದ ಅರ್ಧದೊಷ್ಟು ಚಿತ್ರೀಕರಣ ಮುಗಿದ ಮೇಲೆ ನಟಿ ರಮ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದರಿಂದ ಚಲನಚಿತ್ರದಿಂದ ಹೊರಹೋಗಲು ಬಯಸಿದ್ದರು. ಇದು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಮತ್ತು ರಮ್ಯ ನಡುವೆ ದೊಡ್ಡ ಜಗಳಕ್ಕೂ ಕಾರಣವಾಗಿತ್ತು.
ಈಗ ನಟಿ ಮತ್ತು ನಿರ್ಮಾಪಕರು ಬದಲಾಗಿದ್ದಾರೆ ಎನ್ನುತ್ತವೆ ಮೂಲಗಳು. ಇದೇ ಸಮಯದಲ್ಲಿ ರಮ್ಯ ಕೂಡ ಲಂಡನ್ ನಿಂದ ಹಿಂದಿರುಗುತ್ತಿದ್ದಾರೆ ಎಂಬ ವರದಿಗಳು ಕೂಡ ಇವೆ. "ನಾವು ಚಿತ್ರೀಕರಣದ ಪ್ರಗತಿಯನ್ನು ಶೀಘ್ರದಲ್ಲೇ ತಿಳಿಸುತ್ತೇವೆ. ಹಾಗು ನೂತನ ನಟಿಯನ್ನು ಕೂಡ" ಎಂದಿದ್ದಾರೆ ನಿರ್ಮಾಪಕ ಆಶು.
ರಮ್ಯ ಮತ್ತು ಜಗ್ಗೇಶ್ ಅವರನ್ನು ಹೊರತುಪಡಿಸಿ, ಸುಮನ್ ರಂಗನಾಥ್ ಮತ್ತು ದತ್ತಾತ್ರೇಯ ಚಿತ್ರದ ಮುಖ್ಯ ತಾರಾಗಣದಲ್ಲಿದ್ದವರು.
Advertisement