ಉಳಿದವರಿಗೆ ಒಂದು ವರ್ಷ!

ನಾವು ಕಂಡಂತೆ ವಾಸ್ತುಪ್ರಕಾರ ರಕ್ಷಿತ್ ಶೆಟ್ಟಿ ಟೈಮ್ ಚೆನ್ನಾಗಿದೆ. ಅವರಿಗೆ ಸಿಗ್ತಾ ಇರೋ ರಾಶಿಗಟ್ಲೆ ಆಫರ್ ಗಳು ಇದನ್ನು ದೃಢಪಡಿಸುತ್ತೆ...
ರಕ್ಷಿತ್ ಶೆಟ್ಟಿ (ಸಂಗ್ರಹ ಚಿತ್ರ)
ರಕ್ಷಿತ್ ಶೆಟ್ಟಿ (ಸಂಗ್ರಹ ಚಿತ್ರ)
Updated on

ನಾವು ಕಂಡಂತೆ ವಾಸ್ತುಪ್ರಕಾರ ರಕ್ಷಿತ್ ಶೆಟ್ಟಿ ಟೈಮ್ ಚೆನ್ನಾಗಿದೆ. ಅವರಿಗೆ ಸಿಗ್ತಾ ಇರೋ ರಾಶಿಗಟ್ಲೆ ಆಫರ್ ಗಳು ಇದನ್ನು ದೃಢಪಡಿಸುತ್ತೆ. ಆದರೆ ಉಳಿದವರು ಕಂಡಂತೆ ಅವ್ರಿಗೊಂಚೂರು ಅದೃಷ್ಟ ಕೈಕೊಟ್ಟಿದೆ ಅನ್ನೋದು ನಿಜ.

ರಕ್ಷಿತ್ ಶೆಟ್ಟಿ ಚೊಚ್ಚಲ ನಿರ್ದೇಶನದ ಚಿತ್ರ ಉಳಿದವರು ಕಂಡಂತೆ ಬಿಡುಗಡೆಯಾಗಿ ಮೊನ್ನೆ ಮಾರ್ಚ್ ಇಪ್ಪತ್ತೆಂಟಕ್ಕೆ ಒಂದು ವರ್ಷ. ಚಿತ್ರವೊಂದು ಥೇಟರಿನಲ್ಲಿದ್ದರೆ ಮಾತ್ರ ಅದು ನೂರು ದಿನ, ಸಿಲ್ವರ್ ಜ್ಯುಬಿಲಿ ಅಂತೆಲ್ಲ ಸಂಭ್ರಮ ಆಚರಿಸಿಕೊಳ್ಳುತ್ತದೆ. ಆದರೆ ಉಳಿದವರು ಕಂಡಂತೆ ಥೇಟರಿನಲ್ಲಿ ಭರ್ಜರಿ ಯಶಸ್ಸೇನೂ ಕಂಡಿರಲಿಲ್ಲ. ಆದರೆ ಅದೊಂದು ವಿಭಿನ್ನ ಚಿತ್ರ ಎಂಬುದನ್ನು ಮಾತ್ರ ಪ್ರತಿ ನೋಡುಗನೂ ಒಪ್ಪಿಕೊಂಡಿದ್ದ. ತಾಂತ್ರಿಕವಾಗಿ ಹಾಗೂ ಕಥನ ಶೈಲಿಯಿಂದ ಚಿತ್ರ ರಿಪೀಟ್ ಆಡಿಯನ್ಸುಗಳನ್ನೂ ಹುಟ್ಟುಹಾಕಿತ್ತು. ಉಳಿದವರು ಕಂಡಂತೆ ಹಲವು ಚಿತ್ರಕರ್ಮಿಗಳಿಗೆ ಸ್ಟಡಿ ಮೆಟೀರಿಯಲ್ ಥರವೂ ಕಂಡಿತ್ತು.

ಅದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಾದರೂ ಯು ಕೆ ಚಿತ್ರದ ಹವಾ ತಣ್ಣಗಾಗಿಲ್ಲ. ಇಪ್ಪತ್ತೆಂಟರಂದು ಫೇಸ್‍ಬುಕ್ ಮತ್ತು ಟ್ವಿಟರ್‍ಗಳಲ್ಲಿ ಒಂದೇ ಸಮನೆ ಉಳಿದವರು ಕಂಡಂತೆ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗಿರುವ ಬಗ್ಗೆ ಚಿತ್ರದ ಅಭಿಮಾನಿಗಳು ಸಂಭ್ರಮ ಆಚರಿಸಿದ್ದಾರೆ. ರಕ್ಷಿತ್‍ಶೆಟ್ಟಿ ವಾಲ್ ಮೇಲೆ, ಯು ಕೆ ಫೇಸ್‍ಬುಕ್ ಪೇಜ್ ಮೇಲೆ ಹಾಗೂ ಇತರೆ ಕನ್ನಡ ಗ್ರೂಪ್‍ಗಳಲ್ಲಿ ಉಳಿದವರು ಕಂಡಂತೆ ಚಿತ್ರದ ನೆನಪುಗಳು ಹರಿದಾಡಿವೆ. ರಕ್ಷಿತ್ ಶೆಟ್ಟಿ ಇದನ್ನೆಲ್ಲ ನೆನಪಿಸಿಕೊಳ್ಳುತ್ತಾ ಭಾವುಕರಾಗುತ್ತ `ಈ ಚಿತ್ರ ದೊಡ್ಡ ಹಣ ಮಾಡಲಿಲ್ಲ ಎಂದು ನಿರ್ಮಾಪಕರ ದೃಷ್ಟಿಯಿಂದ ಯೋಚಿಸಿದಾಗ ಬೇಸರ ಆಗುತ್ತದೆ. ಆದರೆ ಚಿತ್ರಕ್ಕೆ ಈ ರೀತಿಯ ಅಭಿಮಾನ ವ್ಯಕ್ತವಾದಾಗ ಮನಸ್ಸು ಸಾರ್ಥಕತೆ ಅನುಭವಿಸುತ್ತದೆ' ಎನ್ನುತ್ತಾರೆ.

ಮೊನ್ನೆ ಪ್ರಕಟವಾದ ರಾಷ್ಟ್ರಪ್ರಶಸ್ತಿಯಿಂದ ಉಳಿದವರು ಕಂಡಂತೆ ಚಿತ್ರ ವಂಚಿತವಾದ ಬಗ್ಗೆ ಅವರ ಮುಖದಲ್ಲಿ ನಿರಾಶೆ ಎದ್ದು ಕಾಣುತ್ತದೆ. ರಕ್ಷಿತ್‍ಗೆ ಅದೃಷ್ಟ ಕೈಕೊಟ್ಟಿದೆ ಅನ್ನೋ ಬಗ್ಗೆ ಕೂಡ ಅವರ ಮಾತಿನಲ್ಲೇ ಕೇಳಬೇಕು. `ಪ್ರಶಸ್ತಿಗೆ ಪರಿಗಣಿಸಿಯೇ ಇರ್ಲಿಲ್ಲ ಅಂದ್ರೆ ಅಷ್ಟೊಂದು ಬೇಸರ ಆಗ್ತಿರಲಿಲ್ವೋ ಏನೋ... ಆದರೆ ಕೊನೆಯ ಸುತ್ತಿನಲ್ಲಿ ಕಾಣಿಸಿಕೊಂಡು, ಇನ್ನೇನು ಗೆದ್ದೇ ಬಿಟ್ಟಿತು ಅನ್ನೋ ಲೆವೆಲ್ಲಲ್ಲಿ ಮಿಸ್ ಆದಾಗ ನಿರಾಸೆ ಸಹಜ. ಜ್ಯೂರಿಯಲ್ಲಿದ್ದ ನನಗೆ ಪರಿಚಯವೇ ಇಲ್ಲದ ಕೆಲವು ಪರರಾಜ್ಯದ ಗಣ್ಯರು, ನನ್ನ ಫೇಸ್‍ಬುಕ್  ಇನ್‍ಬಾಕ್ಸ್ ಗೆ ಮೆಸೇಜ್  ಕಳಿಸಿ, ನಿಮ್ಮ ಚಿತ್ರ ಅದ್ಭುತವಾಗಿದೆ ಅಂತೆಲ್ಲ ಹೊಗಳಿದ್ದರು. ಇದನ್ನೆಲ್ಲ ಕೇಳಿ ಪ್ರಶಸ್ತಿ ಸಿಗುವ ಬಗ್ಗೆ ಇನ್ನಷ್ಟು ವಿಶ್ವಾಸ ಮೂಡಿತ್ತು. ಬಹುಶಃ ನಮ್ಮ ಅದೃಷ್ಟ ಹೀಗಿತ್ತೋ ಏನೋ. ಪ್ರಶಸ್ತಿ ಸಿಕ್ಕಿದ್ರೆ ನನಗೆ ಸಹಜವಾಗಿಯೇ ಖುಷಿ ಆಗ್ತಿತ್ತು.

ಅದಕ್ಕಿಂತ ಹೆಚ್ಚಾಗಿ, ನಿರ್ಮಾಪಕ ಹೇಮಂತ್‍ಗೆ ಒಂದಷ್ಟು ಲಕ್ಷಗಳು ಸಿಕ್ಕಿರುತ್ತಿತ್ತು. ಅಷ್ಟರ ಮಟ್ಟಿಗೆ ಅವರ ನಷ್ಟ ಕಮ್ಮಿ ಆಗಿರುತ್ತಿತ್ತು. ಪ್ರಶಸ್ತಿ ವಿಷಯದಲ್ಲಿ ವಿವಾದಗಳನ್ನು ಓದಿಯಷ್ಟೆ ಬಲ್ಲೆ. ಆ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಬೆಟರ್‍ಲಕ್ ನೆಕ್ಸ್ಟ್ ಟೈಮ್ ಅನ್ನೋದರಲ್ಲಿ ನಂಬಿಕೆ ಇಟ್ಟು ಮುನ್ನಡೆಯುತ್ತೇನೆ. ಸದ್ಯಕ್ಕೆ ನಿರ್ದೇಶನಕ್ಕೆ ಅಲ್ಪವಿರಾಮ. ವಾಸ್ತುಪ್ರಕಾರ ನಂತರ ರಿಕ್ಕಿ ತಯಾರಾಗ್ತಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರೀಕರಣ ಹಂತದಲ್ಲಿದೆ. ಗಿರಿರಾಜ್ ನಿರ್ದೇಶನದ ಕೆ.ಮಂಜು ಚಿತ್ರ ವಾಂಟೆಡ್, ರಿಷಭ್ ಶೆಟ್ಟಿ ಜೊತೆ ಇನ್ನೊಂದು ಚಿತ್ರ ಅವನೇ ಶ್ರೀ ಮನ್ನಾರಾಯಣ.. ಹೀಗೆ ಸದ್ಯಕ್ಕೆ ನಟನೆಯಲ್ಲಿ ಮುಳುಗುತ್ತಿದ್ದೇನೆ.

'ರಕ್ಷಿತ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೈಕೊಟ್ಟಿರಬಹುದು. ಆದರೆ ರಾಜ್ಯಪ್ರಶಸ್ತಿ ಖಂಡಿತಾ ಕೈ ಹಿಡಿಯಲಿದೆ ಎಂಬುದು ಉಳಿದವರು ಕಂಡಂತೆ ಅಭಿಮಾನಿಗಳ ಭರವಸೆಯ ಮಾತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com