
ರಾಟೆ ನಂತರ ಧನಂಜಯ್ ಅಭಿನಯದ ಹೊಸ ಚಿತ್ರ `ಬದ್ಮಾಶ್' ಚಿತ್ರೀಕರಣ ಭರಾಟೆಯಲ್ಲಿ ಸಾಗಿದೆ. ಈಗಾಗಲೇ ಮಾತುಕತೆ(ಕತೆಯಲ್ಲಿ ಮಾತಿನ ಭಾಗ) ಮುಗಿದ ಸಂತೋಷಕ್ಕೆ ಚಿತ್ರತಂಡ ಪ್ರೆಸ್‍ಮೀಟ್ ಆಯೋಜಿಸಿತ್ತು. ಧನಂಜಯ್ ಜೊತೆಗೆ ಸಂಚಿತಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರದಲ್ಲಿ ಫೈಟಿಂಗ್ ಹಾಗೂ ಹಾಡಿನ ಚಿತ್ರೀಕರಣವಷ್ಟೆ ಬಾಕಿಯಿದೆಯಂತೆ.
ನಿರ್ದೇಶಕ ಆಕಾಶ್ ಶ್ರೀವತ್ಸ ಮಾತನಾಡಿ, `ಬದ್ಮಾಶ್'ನಲ್ಲಿ ಚಿತ್ರಕತೆಯೇ ಪ್ರಧಾನವಾಗಿದ್ದು, ವೀಕ್ಷಕರು ಬಯಸುವ ಎಲ್ಲ ಅಂಶಗಳೂ ಇದರಲ್ಲಿವೆ. ಒಂದರೊಳಗೊಂದು ಬೆಸೆದಿರುವಂಥ ಮೂರು ಬೇರೆ ಬೇರೆ ಹಾದಿಯಲ್ಲಿ ಚಿತ್ರ ಸಾಗುತ್ತದೆ. ಧನಂಜಯ್ ನಂಬಿಕೆದ್ರೋಹಿಯ ಪಾತ್ರದಲ್ಲಿ ಕಾಣಿಸಿ ಕೊಂಡರೆ, ರೇಡಿಯೋ ಜಾಕಿಯ ಪಾತ್ರ ಸಂಚಿತಾಳದು. ಅದರಂತೆ ಅಚ್ಯುತ ಕುಮಾರ್ ಹಾಗೂ ಜಹಾಂಗೀರ್ ತಾರಾಗಣದಲ್ಲಿದ್ದಾರೆ ಎಂದು ವಿವರಿಸಿದರು.
`ಪ್ರಸ್ತುತ ವಿದ್ಯಮಾನಗಳ ಆಧಾರದ ಮೇಲೆ ಕತೆ ಹೆಣೆಯಲಾಗಿದೆ. ಇದು ಪಕ್ಕಾ ಮಾಸ್ ಚಿತ್ರ. ನನ್ನ ಚಿತ್ರಗಳ ಬಿಡುಗಡೆಗಾಗಿ ವರ್ಷಗಟ್ಟಲೆ ಕಾಯುವ ತಾಳ್ಮೆಯನ್ನು ಕಳೆದುಕೊಂಡಿದ್ದೇನೆ. ಆದರೆ ಈ ಚಿತ್ರದ ತಂಡವು ಅಂದುಕೊಂಡಂತೆಯೇ ಎಲ್ಲವನ್ನೂ ಬೇಗ ಮುಗಿಸುತ್ತಿದೆ' ಎಂದರು ಧನಂಜಯ್.
6 ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾಗೆ ಬಂದಿರುವ ಖುಷಿ ಹಂಚಿಕೊಂಡ ಸಂಚಿತಾ, ಎಲ್ಲ ಪಾತ್ರಗಳಿಗೂ ಸಮಾನ ಅವಕಾಶವಿದೆ. ಫಿಲ್ಮ್ ಮೇಕಿಂಗ್ನಲ್ಲಿ ಡಿಗ್ರಿ ಪಡೆದ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ ಎಂದರು. ಚಿತ್ರಕ್ಕೆ ಶೀಶ ಅವರ ಸಿನಿಮಾಟೋಗ್ರಫಿ, ಶ್ರೀಕಾಂತ್ ಅವರ ಸಂಕಲನ, ಜುಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನವಿದೆ.
ನಿರ್ಮಾಪಕ ರವಿ ಕಶ್ಯಪ್ ಮಾತನಾಡಿ, ಚಿತ್ರ ಮಾಡುವುದರ ಬಗ್ಗೆ ಹಾಗೂ ಪಾತ್ರಕ್ಕೆ ಸರಿಯಾದ ವ್ಯಕ್ತಿಗಳನ್ನು ಆಯ್ಕೆ ಮಾಡುವುದಕ್ಕೂ ಮೊದಲು ಸಾಕಷ್ಟು ಅಧ್ಯಯನ ನಡೆಸಲಾಗಿದೆ. ದಕ್ಷಿಣದ ಚಿತ್ರಗಳಿಗೆ ಕಾರ್ಪೋರೇಟ್ ವಿನ್ಯಾಸ ನೀಡುವುದು ನನ್ನ ಗುರಿ ಎಂದರು. ಕಾರ್ಯನಿರ್ವಾಹಕ ನಿರ್ಮಾಪಕರಾಗಿರುವ ರೂಪಾ ಅಯ್ಯರ್ ಉಪಸ್ಥಿತರಿಸಿದ್ದರು.
Advertisement