
ಬೆಂಗಳೂರು: ಕೊನೆಗೂ ರನ್ನ ಚಿತ್ರತಂಡಕ್ಕೆ ನಿಟ್ಟುಸಿರು ಬಿಡುವ ಸಂದರ್ಭ. ಹಲವಾರು ಅಡೆತಡೆಗಳು, ಹಣಕಾಸಿನ ತೊಂದರೆಗಳಿಂದ ಕುಂಟುತ್ತಾ ಸಾಗುತ್ತಿದ್ದ ಕಿಚ್ಚ ಸುದೀಪ್ ಅಭಿನಯದ ರನ್ನ ಚಲನಚಿತ್ರಕ್ಕೆ ಸೆನ್ಸಾರ್ ಮಂಡಲಿಯಿಂದ ಯು/ಎ ಪ್ರಮಾಣಪತ್ರ ದೊರಕಿದೆ. ನಿರ್ದೇಶಕ ನಂದ ಕಿಶೋರ್ ಮತ್ತು ಚಿತ್ರತಂಡ ಬಿಡುಗಡೆಗೆ ಎದುರುನೋಡುತ್ತಿದೆ.
ನಿರ್ದೇಶಕ ನಂದ ಕಿಶೋರ್ ಅವರು ಹೇಳುವಂತೆ ಇಡೀ ಚಿತ್ರತಂಡ ಮತ್ತು ಸುದೀಪ್ ಕಷ್ಟದ ಸಮಯದಲ್ಲಿ ತಮ್ಮ ಬೆನ್ನಿಗೆ ನಿಂತು ಸಹಕರಿಸಿದರು ಎನ್ನುತ್ತಾರೆ. "ಎಲ್ಲ ತೊಂದರೆಗಳ ಹೊರತಾಗಿಯೂ, ಎಲ್ಲರೂ ಸಹಕಾರ ನೀಡಿದರು ಹಾಗೂ ನಿಷ್ಟಾವಂತರಾಗಿ ಕೆಲಸ ಮಾಡಿದರು. ಸುದೀಪ್ ನಮ್ಮ ಬೆನ್ನಿಗೆ ಕಲ್ಲಿನಂತೆ ನಿಂತಿದ್ದರು" ಎನ್ನುತ್ತಾರೆ.
'ರನ್ನ' ಸುತ್ತ ಇರುವ ಈ ಬಹು ನಿರೀಕ್ಷೆಯಿಂದ ಹಲವಾರು ನಿರ್ಮಾಪಕರು ತಮ್ಮ ಚಿತ್ರದ ದಿನಾಂಕವನ್ನು ಮೂಂದೂಡಿದ್ದಾರಂತೆ. ಇಂತಹ ಅತಿ ಹೆಚ್ಚಿನ ನಿರೀಕ್ಷೆ ಕೆಲವೊಮ್ಮೆ ಚಿತ್ರಕ್ಕೆ ಹಾನಿಯುಂಟುಮಾಡಬಲ್ಲದು ಎನ್ನುತ್ತಾರೆ ನಿರ್ದೇಶಕ. "ನಾನು ಚಿತ್ರರಸಿಕರಲ್ಲಿ ಸಿನೆಮಾ ಬಗ್ಗೆ ಅತಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳದಂತೆ ಮನವಿ ಮಾಡುತ್ತೇನೆ. ಕುಟುಂಬ ವೀಕ್ಷಣೆಗೆ ಮಾಡಿರುವ ಪ್ರಾಮಾಣಿಕ ಚಿತ್ರ ರನ್ನ. ಸಿನೆಮಾದಲ್ಲಿರುವ ಒಳ್ಳೆಯ ಅಂಶಗಳನ್ನು ಜನ ಸ್ವೀಕರಿಸಬೇಕು. ಸಿನೆಮಾ ಬಗೆಗಿನ ಧನಾತ್ಮಕ ಅಭಿಪ್ರಾಯಗಳು ನನ್ನಂತಹ ನಿರ್ದೇಶಕರಿಗೆ ಉತ್ತೇಜನ ನೀಡುತ್ತದೆ" ಎಂದಿದ್ದಾರೆ ನಂದಕಿಶೋರ್.
Advertisement