
ನಿರ್ದೇಶಕ ಅನೂಪ್ ಭಂಡಾರಿ ಅವರ `ರಂಗಿತರಂಗ' ಚಿತ್ರಕ್ಕೆ ಸಿನಿ ಸ್ಟಾರ್‍ಗಳು `ಜೈಹೋ...' ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಚಿತ್ರದ ಟ್ರೈಲರ್.
ಹೌದು, ಈಗಾಗಲೇ ಯೂಟ್ಯೂಬ್‍ನಲ್ಲಿ ಸಾಮಾನ್ಯ ಪ್ರೇಕ್ಷಕರ ಗಮನ ಸೆಳೆದ ಈ ಸಿನಿಮಾದ ಟ್ರೈಲರ್ ಈಗ ಸ್ಟಾರ್ ನಟರ ಮನೆಗಳಿಗೂ ಪ್ರವೇಶವಾಗುತ್ತಿದೆ. ಆ ಮೂಲಕ ಚಿತ್ರದ ಫ್ರೇಮ್ ಗಳ ಸ್ಟಾರ್ ಸಂಚಾರಿ ಆರಂಭಿಸಿದ್ದು, ಸಿನಿಮಾ ಬಿಡುಗಡೆಯ ಹೊತ್ತಿಗೆ `ರಂಗಿತರಂಗ' ಚಿತ್ರಕ್ಕೆ ಗಾಂಧಿನಗರದಲ್ಲಿ ದೊಡ್ಡ ಮಟ್ಟದಲ್ಲಿ ಟಾಕ್ ದಕ್ಕಿಸಿಕೊಳ್ಳುವುದು ಗ್ಯಾರಂಟಿ.
ನೀರಜ್ ಭಂಡಾರಿ ಹಾಗೂ ಅವಂತಿಕಾ ಶೆಟ್ಟಿ ಹಾಗೂ ರಾಧಿಕಾ ಚೇತನ್ ಜೋಡಿಯಾಗಿ ಅಭಿನಯಿಸಿರುವ ಚಿತ್ರವಿದು. ಈ ಚಿತ್ರಕ್ಕಾಗಿ ಕೆಲಸ ಮಾಡಿದ ಬಹುತೇಕರಿಗೆ ಇದು ಮೊದಲ ಸಿನಿಮಾ. ಆದರೆ, ಸಿನಿಮಾದ ಟ್ರೈಲರ್ ಮಾತ್ರ ಅನುಭವಿ ನಿರ್ದೇಶಕ ಹಾಗೂ ನಾಯಕ ನಟರ ಗಮನ ಸೆಳೆಯುತ್ತಿದೆ.
ಪ್ರಕಾಶ್ ನಿರ್ಮಾಣದ ಈ ಚಿತ್ರದ ಟ್ರೈಲರ್ ಹಾಗೂ ಕೆಲ ಮಾತಿನ ಭಾಗಗಳನ್ನು ಇತ್ತೀಚೆಗೆ ನಟ ಶ್ರೀಮುರಳಿ ನೋಡಿದ್ದಾರೆ. ಚಿತ್ರ ತಂಡದ ಜತೆಗೆ ತಮ್ಮ ಮನೆಯಲ್ಲೇ ವೀಕ್ಷಿಸಿದ ಶ್ರೀಮುರಳಿ, `ಸಿನಿಮಾದಲ್ಲಿ ಕುತೂಹಲದ ಅಂಶ ಇದೆ. ಒಂದು ಸಿನಿಮಾಗೆ ಹಾಡುಗಳು ಎಷ್ಟು ಮುಖ್ಯವೋ ಪ್ರೇಕ್ಷಕರನ್ನು ಕರೆತರಲು ಟ್ರೈಲರ್ ಕೂಡ ಅಷ್ಟೇ ಮುಖ್ಯ. ಇವೆರಡು ಸಿನಿಮಾದ ಆರಂಭದ ಅಹ್ವಾನದ ಪತ್ರಿಕೆಗಳು. ಇವು ಚೆನ್ನಾಗಿದ್ದರೆ ಸಿನಿಮಾ ಅರ್ಧ ಗೆದ್ದಂತೆ' ಎಂದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ನಟ ಶ್ರೀಮುರಳಿ ಅವರ ಮೆಚ್ಚುಗೆ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಉತ್ಸಾಹ ಮೂಡಿಸಿದೆ.
ಮತ್ತೊಂದು ವಿಶೇಷ ಅಂದರೆ ರಂಗಿತರಂಗ ಚಿತ್ರತಂಡವನ್ನು ಸ್ವತಃ ನಟ ಯಶ್ ಅಹ್ವಾನಿಸಿ ಸಿನಿಮಾದ ಟ್ರೈಲರ್ ನೋಡಿದ್ದಾರೆ. ತುಂಬಾ ಖುಷಿಯಾದ ನಟ ಯಶ್, `ಚಿತ್ರದ ಬಿಡುಗಡೆ, ಆ ನಂತರ ಪ್ರಮೋಷನ್ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲುತ್ತೇನೆ. ಒಳ್ಳೆಯ ಸಿನಿಮಾ ಮಾಡಿದ್ದಾರೆ. ನನ್ನ ಪ್ರಕಾರ ತಾಂತ್ರಿಕವಾಗಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡು ಮಾಡುತ್ತದೆ' ಎಂದು ಚಿತ್ರದ ಕುರಿತು ಹೇಳಿದ್ದಾರೆ. ಇದರ ಜತೆಗೆ ಸಂಗೀತ ಹಾಗೂ ಕ್ಯಾಮೆರಾ ವಿಭಾಗದ ಕೆಲವರಿಗೆ ಚಿತ್ರದ ಮೇಕಿಂಗ್ ಹಾಗೂ ಟ್ರೈಲರ್ ಅನ್ನು ತೋರಿಸಿರುವ ಚಿತ್ರತಂಡಕ್ಕೆ, ನೋಡಿದ ಎಲ್ಲರಿಂದಲೂ ಒಳ್ಳೆಯ ಪ್ರತಿಕ್ರಿಯೇ ಬರುತ್ತಿದೆ. ಇದೇ ಉತ್ಸಾಹದಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ ಆಂಡ್ ಟೀಮ್.
`ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಚಿತ್ರರಂಗದ ಬಹುತೇಕರಿಗೆ ನಮ್ಮ ಸಿನಿಮಾದ ಟ್ರೈಲರ್ ಮೆಚ್ಚುಗೆಯಾಗಿದೆ. ಒಂದು ಕಡೆ ಚಿತ್ರರಂಗ, ಮತ್ತೊಂದು ಕಡೆ ಪ್ರೇಕ್ಷಕ ವಲಯ ಈ ಎರಡು ಕಡೆಯಿಂದ ಸಿನಿಮಾ ಬಿಡುಗಡೆಗೂ ಮುನ್ನವೇ ಇಂಥ ಬೆಂಬಲ ಸಿಗುತ್ತಿರುವುದನ್ನು ನೋಡಿದರೆ ಸಿನಿಮಾ ಮಾಡಿದಕ್ಕೂ ನಮಗೂ ಖುಷಿಯಾಗುತ್ತಿದೆ. ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರು
ನೋಡಿದರೂ ಇದೇ ರೀತಿ ಖುಷಿ ಪಡುತ್ತಾರೆಂಬ ನಂಬಿಕೆ ಇದೆ' ಎನ್ನುತ್ತಾರೆ ನಿರ್ದೇಶಕ ಅನೂಪ್ ಭಂಡಾರಿ. ಒಟ್ಟಿನಲ್ಲಿ ಸರದಿಯಂತೆ `ರಂಗಿತರಂಗ' ಸಿನಿಯಾದ ಟ್ರೈಲರ್ ಚಿತ್ರತಂಡದ ಜತೆಗೆ ಸ್ಟಾರ್ ಮನೆಗಳಿಗೆ ಹೋಗುತ್ತಿದೆ.
Advertisement