
ಬೆಂಗಳೂರು: ಹಲವಾರು ಹಳೆಯ ನಿರ್ಮಾಪಕರು ಮತ್ತೆ ಕನ್ನಡ ಚಲನಚಿತ್ರಗಳಿಗೆ ಹೂಡಿಕೆ ಮಾಡುತ್ತಿರುವುದು ಆಸಕ್ತಿದಾಯಕ ಸಂಗತಿ. ಹಿಂದೆ 'ಪ್ರೇಮ ರಾಗ ಹಾಡು ಗೆಳತಿ', 'ನಮ್ಮೂರ ಮಂದಾರ ಹೂವೆ' ಮತ್ತು 'ಶ್ರೀ ಮಂಜುನಾಥ' ಸಿನೆಮಾಗಳನ್ನು ನಿರ್ಮಿಸಿದ್ದ ಜಯಶ್ರೀ ದೇವಿ ಅವರು ಹಿಂದಿ ಸಿನೆಮಾ 'ಓ ಮೈ ಗಾಡ್' (ಒ ಎಂ ಜಿ) ಸಿನೆಮಾದ ಹಕ್ಕುಗಳನ್ನು ಖರೀದಿಸಿದ್ದಾರಂತೆ. ಹಾಗೆಯೇ ಅದನ್ನು ಕನ್ನಡದಲ್ಲಿ ನಿರ್ಮಿಸಲಿದ್ದಾರಂತೆ.
ಉಮೇಶ್ ಶುಕ್ಲಾ ಅವರ ಗುಜರಾತಿ ನಾಟಕ ಆಧಾರಿತ 'ಒ ಎಂ ಜಿ' ೨೦೧೨ ರಲ್ಲಿ ತೆರೆ ಕಂಡ ವ್ಯಂಗ್ಯ ಭರಿತ ಹಿಂದಿ ಹಾಸ್ಯ ಸಿನೆಮಾ. ಇದರಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಮುಖ್ಯ ಭೂಮಿಕೆಯಲ್ಲಿದ್ದರು. ಸಿನೆಮಾಗೆ ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿತ್ತು ಹಾಗು ಕನ್ನಡತಿ ನಿಧಿ ಸುಬ್ಬಯ್ಯ ಈ ಸಿನೆಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ನಂತರ ಈ ಸಿನೆಮಾವನ್ನು ವೆಂಕಟೇಶ್ ಮತ್ತು ಪವನ್ ಕಲ್ಯಾಣ್ ಅವರ ನಟನೆಯಲ್ಲಿ 'ಗೋಪಾಲ ಗೋಪಾಲ' ಎಂದು ರಿಮೇಕ್ ಮಾಡಲಾಗಿತ್ತು.
ಇನ್ನೂ ಅಧಿಕೃತ ಹೇಳಿಕೆ ಹೊರಬೀಳಬೇಕಿದ್ದರೂ, ಗಾಂಧಿನಗರದ ವದಂತಿಯಂತೆ ಈ ಸಿನೆಮಾವನ್ನು ಎಂ ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ. ಉಪೇಂದ್ರ, ಅಕ್ಷಯ್ ಕುಮಾರ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಮತ್ತು ಪರೇಶ್ ರಾವಲ್ ಪಾತ್ರಕ್ಕೆ ರವಿಚಂದ್ರನ್ ಅವರನ್ನು ಕೇಳಲಾಗಿದೆಯಂತೆ. ಎಲ್ಲವೂ ಎಣಿಕೆಯಂತೆ ನಡೆದರೆ ಸಿನೆಮಾ ನವೆಂಬರ್ ವೇಳೆಗೆ ಸೆಟ್ಟೇರಲಿದೆ.
Advertisement