
ಅಹ್ಮದಾಬಾದ್: ಕಿರುತೆರೆ ನಿರ್ಮಾಪಕ ನೀರಜ್ ಗ್ರೋವರ್ ಹತ್ಯಾ ಪ್ರಕರಣದಿಂದ ಕುಖ್ಯಾತಿಗಳಿಸಿದ್ದ ಸ್ಯಾಂಡಲ್ ವುಡ್ ನಟಿ ಮರಿಯಾ ಸೂಸೈರಾಜ್ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಮರಿಯಾ ಅವರನ್ನು ಗುರುವಾರ ಬಂಧಿಸಿದ್ದು, ಮರಿಯಾ ಅವರು ನಡೆಸುತ್ತಿದ್ದ ಏಜೆನ್ಸಿ ಹಜ್ ಯಾತ್ರಿಕರಿಗೆ ಟಿಕೆಟ್ ಕೊಡಿಸುವ ಆಮಿಷ ಒಡ್ಡಿ ಸುಮಾರು 2.68 ಕೋಟಿ ಹಣ ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಮೂಲಗಳ ಪ್ರಕಾರ ಮರಿಯಾ ಅವರು ವಡೋದರಾದಲ್ಲಿ ವಿಮಾನಯಾನ ಟಿಕೆಟ್ ಬುಕ್ಕಿಂಗ್ ಏಜೆನ್ಸಿಯನ್ನು ತೆರೆದಿದ್ದರು ಮತ್ತು 2.68 ಕೋಟಿ ಮೌಲ್ಯದ ಟಿಕೆಟ್ ಬುಕ್ ಮಾಡಿ ಎಲ್ಲ ಟಿಕೆಟ್ ಗಳನ್ನು ದಿಢೀರ್ ರದ್ದು ಮಾಡಿ ಅಷ್ಟೂ ಹಣವನ್ನು ಲಪಟಾಯಿಸುವ ಪ್ರಯತ್ನ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಅವರನ್ನು ವಶಕ್ಕೆ ಪಡೆದಿರುವ ವಡೋದರಾ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಕನ್ನಡದ ನಟಿಯಾಗಿರುವ ಮರಿಯಾ ಸೂಸೈರಾಜ್ ಅವರು ಈ ಹಿಂದೆ ತಮ್ಮ ಪ್ರಿಯಕರನೊಂದಿಗೆ ಸೇರಿ ಮುಂಬೈನಲ್ಲಿ ಕಿರುತೆರೆ ನಿರ್ಮಾಪಕ ನೀರಜ್ ಗ್ರೋವರ್ ಎಂಬಾತನನ್ನು ಹತ್ಯೆಗೈದು ದೇಶಾದ್ಯಂತ ಕುಖ್ಯಾತಿಗಳಿಸಿದ್ದರು. ಅಲ್ಲದೆ ಪ್ರಕರಣ ಸಂಬಂಧ ಜೈಲು ಶಿಕ್ಷೆ ಕೂಡ ಅನುಭವಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೊಲೆ ಅಪರಾಧದಿಂದ ಪಾರಾಗಿದ್ದ ಮರಿಯಾ ಅವರು, ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಆರೋಪದಡಿಯಲ್ಲಿ ಶಿಕ್ಷೆ ಅನುಭವಿಸಿದ್ದರು.
Advertisement