ಮಲಯಾಳಮ್ ನಲ್ಲಿ ಕನ್ನಡಿಗರ ಸದ್ದು

ಮಲಯಾಳಮ್ ನ ಬಹುತಾರಾಗಣವಿರುವ, ಬಹು ನಿರೀಕ್ಷೆ ಹುಟ್ಟಿಸಿರುವ ಕನಲ್ ಚಿತ್ರದಲ್ಲಿ ಕನ್ನಡದ ಮೂವರು ಕಲಾವಿದರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ...
ಕನಲ್ ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)
ಕನಲ್ ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)

ಮಲಯಾಳಮ್ ನ ಬಹುತಾರಾಗಣವಿರುವ, ಬಹು ನಿರೀಕ್ಷೆ ಹುಟ್ಟಿಸಿರುವ ಕನಲ್ ಚಿತ್ರದಲ್ಲಿ ಕನ್ನಡದ ಮೂವರು ಕಲಾವಿದರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಹೆಚ್ಚು ಕಡಿಮೆ ಎರಡು ವರ್ಷಗಳಿಂದ ತೆರೆಗೆ ಬರುತ್ತಿದೆ ಬರುತ್ತಿದೆ ಎಂದು ಹೇಳುತ್ತಲೇ ಇದ್ದ ರಿಂಗ್ ರೋಡ್ ಚಿತ್ರ ಮುಂದಿನ ವಾರ ತೆರೆಗೆ ಬರಲಿದೆ ಎಂಬ ಖಚಿತ ಸುದ್ದಿ ಹೊರಬಿದ್ದಿದೆ. ಇದು  ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿಕಿತಾಗೆ ಸಂತೋಷ ತಂದಿದೆ. ಅವರ ಸಂತೋಷಕ್ಕೆ ಇನ್ನೊಂದು ಕಾರಣ, ಕನಲ್. ಮಲಯಾಳಮ್ ನ ಈ ಚಿತ್ರ ಅದೇ ದಿನ  ಬಿಡುಗಡೆಯಾಗುತ್ತಿದೆ. ಪದ್ಮಕುಮಾರ್ ನಿರ್ದೇಶನದ ಈ ಚಿತ್ರ ಥ್ರಿಲ್ಲರ್ ಚಿತ್ರವಾಗಿದ್ದು, ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ  ಕನ್ನಡದ ಆ ದಿನಗಳು, ಉಗ್ರಂ, ಮೈತ್ರಿ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ ಅತುಲ್ ಕುಲಕರ್ಣಿ ಕೂಡ ಕಾಣಿಸಿಕೊಂಡಿದ್ದಾರೆ.

ಮೋಹನ್ ಲಾಲ್ ಮತ್ತು ಅತುಲ್ ಕುಲಕರ್ಣಿ ತ್ರಿಕೋನ ಪ್ರೇಮಕ್ಕೆ ನಿಕಿತಾನೇ ಕೇಂದ್ರ. ಹದಿಮೂರು ವರ್ಷಗಳ ಹಿಂದೆ ಕೈಯತ್ತುಮ್ ದೂರಮ್  ಎಂಬ ಮಲಯಾಳಂ ಚಿತ್ರದಲ್ಲಿ ನಿಕಿತಾ  ನಟಿಸಿದ್ದರು. ಅದು ಅವರ ವೃತ್ತಿ ಜೀವನದ ಎರಡನೆಯ ಚಿತ್ರ. ಅದರಲ್ಲೂ ಕೇರಳದ ಸೂಪರ್ ಸ್ಟಾರ್ ಮಮ್ಮುಟ್ಟಿಯೊಂದಿಗೆ ನಟಿಸಿದ್ದರು. ಹೊಸ ತಲೆಮಾರಿನ ಫಹಾದ್ ಫಾಜಿಲ್ ಕೂಡ ಚಿತ್ರದಲ್ಲಿ ಗಮನ ಸೆಳೆದಿದ್ದರು. ಇದಾದ ಮೇಲೂ ಮೂರು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ನಿಕಿತಾ ಮೂರು ವರ್ಷಗಳ ಬಳಿಕ ಈಗ ಮತ್ತೆ ಮಲಯಾಳಂ ಪರದೆಯಲ್ಲಿ ಮಿಂಚಲಿದ್ದಾರೆ. ಈ  ಚಿತ್ರದ ಸಂಗೀತದ ವಿಭಾಗದಲ್ಲೂ ಕನ್ನಡದವರ ಹೆಸರಿದೆ. ರಾಜ್ಯದ ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್ ಅವರು ಈ ಚಿತ್ರದಲ್ಲಿ ಒಂದು ಗೀತೆಯನ್ನು ಹಾಡಿದ್ದಾರೆ.

`ಔಸಪ್ಪಚ್ಚನ್ ಕನಲ್ ಚಿತ್ರದ ಸಂಗೀತ ನಿರ್ದೇಶಕರು. ಅವರು ನನಗೆ ಬಹಳ ಕಾಲದ ಪರಿಚಯ. ಕನಲ್ ಚಿತ್ರದಲ್ಲಿ ಒಂದು ಗಝಲ್‍ನಂತಹ ಒಂದು ಹಿಂದಿ-ಉರ್ದು ಮಿಶ್ರಿತ ಗೀತೆ ಇದೆ. ನೀವೇ ಹಾಡಬೇಕೆಂದರು. ಹಾಡಿದೆ' ಎಂದು ಫಯಾಜ್ ಖಾನ್ ಹಾಡಲು ಕಾರಣವಾದ ಸಂಗತಿಯನ್ನು ಹಂಚಿಕೊಂಡಿದ್ದಾರೆ. `ಮಗರ್ ತುಮ್ ' ಗೀತೆಯನ್ನು ಎಂಬ ಮಧುವಾಸುದೇವನ್ ಬರೆದಿದ್ದು, ಈ  ಗೀತೆಯೇ ಚಿತ್ರದಲ್ಲಿರುವ ಐದು ಹಾಡುಗಳಲ್ಲಿ ದೀರ್ಘವಾದದ್ದು. ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಈ ಚಿತ್ರ ಕೇರಳದ ಸಿನಿರಸಿಕರಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ. ರೈಲು ಪ್ರಯಾಣದಲ್ಲಿ ಪರಿಚಯಿವಾಗುವ ಕೇಂದ್ರ ಪಾತ್ರಗಳ ಬದುಕಿನ ಆಗುವ ಬದಲಾವಣೆಗಳನ್ನು ಚಿತ್ರ ರೋಚಕವಾಗಿ ಬಿಚ್ಚಿಡುತ್ತಾ ಹೋಗುತ್ತದೆ. ನಿರ್ದೇಶನ, ಭಿನ್ನ ಚಿತ್ರಕತೆಗಳ ಮೂಲಕ ಗಮನ ಸೆಳೆದ ಅನೂಪ್‍ಮೆನನ್ ಕೂಡ ಚಿತ್ರದಲ್ಲಿದ್ದಾರೆ.

ಕೇರಳದ ನಿರ್ದೇಶಕರು ಬೆಂಗಳೂರನ್ನು ಕೇಂದ್ರವಾಗಿಟ್ಟು ಸಿನಿಮಾ ಮಾಡುತ್ತಿರುವ ದಿನಗಳಲ್ಲಿ, ಕನ್ನಡದ ನೆಲದಲ್ಲಿ ತಮ್ಮ ಚಿತ್ರಗಳನ್ನು ಚಿತ್ರೀಕರಿಸುತ್ತಿರುವ ಹೊತ್ತಲ್ಲಿ ಕನ್ನಡ ಚಿತ್ರರಂಗದ  ಕಲಾವಿದರು ಇನ್ನೊಂದು ಭಾಷೆಯಲ್ಲಿ ಬೇಡಿಕೆಯ ಕಲಾವಿದರಾಗುವುದು ಒಳ್ಳೆಯ ಬೆಳವಣಿಗೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com