ಖಳನಾಯಕರ ಜೊತೆ ಹೆಜ್ಜೆ ಹಾಕಿದ ರಣಚಂಡಿ ರಾಗಿಣಿ
ಬೆಂಗಳೂರು: ರಾಗಿಣಿ ದ್ವಿವೇದಿ ನಟಿಸುತ್ತಿರುವ 'ರಣಚಂಡಿ' ಸಿನೆಮಾದಲ್ಲಿ ಒಂದು ವಿಶೇಷ ಹಾಡಿದೆಯಂತೆ. ಕನ್ನಡ ಚಿತ್ರೋದ್ಯಮದ ವಿಲನ್ ಗಳ ಜೊತೆಗೆ ರಾಗಿಣಿ ಹೆಜ್ಜೆ ಹಾಕಲಿದ್ದಾರಂತೆ. ದಕ್ಷಿಣ ಭಾರತದ ಚಿತ್ರೋದ್ಯಮದಲ್ಲೇ ಇಂತಹ ಪ್ರಯತ್ನ ಮೊದಲನೆಯದು ಎನ್ನುತ್ತದೆ ಚಿತ್ರತಂಡ.
ಕನ್ನಿಂಗ್ಯಮ್ ರಸ್ತೆಯ ಜನಪ್ರಿಯ ಪಬ್ ಒಂದರಲ್ಲಿ ಈ ಹಾಡಿನ-ನೃತ್ಯದ ಚಿತ್ರೀಕರಣ ನಡೆಯುತ್ತಿದ್ದಾಗ ಮಾತಿಗೆ ಸಿಕ್ಕ ರಾಗಿಣಿ "ಖಳನಾಯಕರು ಕೂಡ ಉತ್ತಮ ನೃತ್ಯಗಾರರು" ಎಂದಿದ್ದಾರೆ.
"ನಾವು ಸಾಮಾನ್ಯವಾಗಿ ಚಲನಚಿತ್ರದಲ್ಲಿ ಬಳಸುವ ತಂತ್ರಗಳನ್ನು ಮೀರಿ ಹೊಸದಾಗಿ ಏನನ್ನಾದರೂ ಮಾಡಬೇಕೆನ್ನಿಸಿ ಖಳನಾಯಕರ ಜೊತೆ ಹಾಡನ್ನು ಮಾಡಿದ್ದೇವೆ" ಎನ್ನುತ್ತಾರೆ ನಟಿ.
ಕನ್ನಡ ಚಿತ್ರೋದ್ಯಮದ ಜನಪ್ರಿಯ ಖಳನಟರಾದ ನಾರಾಯಣ ಸ್ವಾಮಿ, ಉಗ್ರಂ ರವಿ, ಪೆಟ್ರೋಲ್ ಪ್ರಸನ್ನ, ದಯಾನಿ ಕುಟ್ಟಪ್ಪ ಮತ್ತು ಉದಯ್, ರಾಗಿಣಿ ಜೊತೆಗೆ ಹೆಜ್ಜೆ ಹಾಕಲಿದ್ದಾರಂತೆ. "ಅವರು ಹೊಡೆ ಬಡಿದಾಡುವುದು, ಅವಾಚ್ಯ ಶಬ್ದಗಳಿಂದ ಬೈದಾಡುವುದು ಮತ್ತು ಕೆಟ್ಟದಾಗಿ ಕಾಣಿಸುವುದು ಸಿನೆಮಾಗಳಲ್ಲಿ ಸಾಮಾನ್ಯ. ಆದರೆ ಈಗ ಅವರನ್ನು ಹೊಸ ಅವತಾರದಲ್ಲಿ ನೋಡುವುದಕ್ಕೆ ಪ್ರೇಕ್ಷಕರು ಇಷ್ಟ ಪಡುತ್ತಾರೆ" ಎಂದು ನಟಿ ತಿಳಿಸಿದ್ದಾರೆ.
ಸಿನೆಮಾದ ನಿರ್ದೇಶಕ ಆನಂದ್ ಪಿ ರಾಜು. ಯು ಪಿ ಆರ್ ಸಿನೆಮಾಗೆ ಸಂಗೀತ ನೀಡಿದ್ದಾರೆ ರಾಗಿಣಿ ಅವರ ನಿರ್ದೇಶನದ ಮೇರೆಗೆ ನೃತ್ಯ ನಿರ್ದೇಶಕ ಕುಲಭೂಷಣ್ ರಾಜೆ ಅರಸ್ ಈ ಹಾಡಿಗೆ ಕೊರಿಯೋಗ್ರಾಫ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ