ಹಣವಿರುವುದೇ ಕಮರ್ಷಿಯಲ್ ಸಿನೆಮಾಗಳಲ್ಲಿ: 'ಕೋಟಿಗೊಬ್ಬ2' ನಿರ್ದೇಶಕ ರವಿಕುಮಾರ್

ರಜನಿಕಾಂತ್, ಶರತ್ ಕುಮಾರ್, ಕಮಲ ಹಾಸನ್, ಶಿವಾಜಿ ಗಣೇಶನ್, ಸೂರ್ಯ, ಅಜಿತ್ ಕುಮಾರ್, ಮಾಧವನ್ ಮುಂತಾದ ಖ್ಯಾತ ತಮಿಳು ತಾರೆಯರು ಹಾಗು ತೆಲುಗಿನ ಚಿರಂಜೀವಿ,
'ಕೋಟಿಗೊಬ್ಬ2' ನಿರ್ದೇಶಕ ರವಿಕುಮಾರ್
'ಕೋಟಿಗೊಬ್ಬ2' ನಿರ್ದೇಶಕ ರವಿಕುಮಾರ್
ಬೆಂಗಳೂರು: ರಜನಿಕಾಂತ್, ಶರತ್ ಕುಮಾರ್, ಕಮಲ ಹಾಸನ್, ಶಿವಾಜಿ ಗಣೇಶನ್, ಸೂರ್ಯ, ಅಜಿತ್ ಕುಮಾರ್, ಮಾಧವನ್ ಮುಂತಾದ ಖ್ಯಾತ ತಮಿಳು ತಾರೆಯರು ಹಾಗು ತೆಲುಗಿನ ಚಿರಂಜೀವಿ, ನಾಗಾರ್ಜುನ ಮುಂತಾದವರನ್ನು ನಿರ್ದೇಶಿಸಿರುವ ನಟ-ನಿರ್ದೇಶಕ ಕೆ ಎಸ್ ರವಿಕುಮಾರ್ ಕಮರ್ಷಿಯಲ್ ಸಿನೆಮಾಗಳ ಬಗ್ಗೆ ಯಾವುದೇ ಸಂಶಯವಿಲ್ಲದ ಬೆಂಬಲಿಗ. "ಹಣವಿರುವುದೇ ಅಲ್ಲಿಯೇ" ಎಂದು ನಗುತ್ತ ನುಡಿಯುತ್ತಾರೆ ನಿರ್ದೇಶಕ. 
ಹೆಚ್ಚು ತಮಿಳು ಮತ್ತು ಕೆಲವು ತೆಲುಗು ಸಿನೆಮಾಗಳನ್ನು ಸೇರಿ ಸುಮಾರು 40 ಸಿನೆಮಾಗಳನ್ನು ನಿರ್ದೇಶಿರುವ ರವಿಕುಮಾರ್ ಒಳ್ಳೆಯ ನಟರು ಮತ್ತು ಉತ್ತಮ ಸ್ಕ್ರಿಪ್ಟ್ ಗಳೊಂದಿಗೆ ನಿರ್ಮಿಸುವ ಕಮರ್ಷಿಯಲ್ ಸಿನೆಮಾಗಳಲ್ಲಿಯೇ ಹಣವಿರುವುದು ಎಂದು ನಂಬುತ್ತಾರೆ . 
ಈ ಖ್ಯಾತ ನಿರ್ದೇಶಕ ಈಗ ಕನ್ನಡ ಚಿತ್ರೋದ್ಯಮದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕೋಟಿಗೊಬ್ಬ2 ಚಿತ್ರದಲ್ಲಿ ಸುದೀಪ್ ನಾಯಕ ನಟ ಮತ್ತು ನಿತ್ಯಾ ಮೆನನ್ ನಾಯಕ ನಟಿ. 
ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನೆಮಾ ತಮಿಳಿನಲ್ಲಿ 'ಮುಡಿಂಜ ಇವನ್ ಪುಡಿ' ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. "ಸುದೀಪ್ ಕನ್ನಡದಲ್ಲಿ ದೊಡ್ಡ ಹೀರೊ ಆದರೆ ತಮಿಳಿನಲ್ಲಿ ಅವರನ್ನು ವಿಲನ್ ಎಂದು ಗುರುತಿಸಲಾಗುತ್ತದೆ. ಅವರು ಒಳ್ಳೆಯ ನಟ ಆದುದರಿಂದ ಕೋಟಿಗೊಬ್ಬ 2 ರಲ್ಲಿ ಈ ಎರಡು ಇಮೇಜ್ ಗಳನ್ನೂ ದುಡಿಸಿಕೊಳ್ಳಲು ಪ್ರಯತ್ನಿಸಿದೆವು" ಎನ್ನುತ್ತಾರೆ ನಿರ್ದೇಶಕ. 
ದಿವಂಗತ ಖ್ಯಾತ ನಟ ವಿಷ್ಣುವರ್ಧನ್ ನಟಿಸಿದ್ದ 'ಕೋಟಿಗೊಬ್ಬ' ತಮಿಳಿನ 'ಭಾಷಾ' ಸಿನೆಮಾದ ರಿಮೇಕ್ ಆಗಿತ್ತು. ಆ ಸಿನೆಮಾಗೂ ಕೋಟಿಗೊಬ್ಬ 2 ಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ ರವಿಕುಮಾರ್. "ವಿಷ್ಣುವರ್ಧನ್ ಅವರ ಸಿನೆಮಾ ಭೂಗತ ದೊರೆಯ ಸಿನೆಮಾ. ಆದರೆ ನಮ್ಮದು ಎಲ್ಲ ವಯಸ್ಸಿನವರು ನೋಡಬಹುದಾದ ಮನರಂಜನಾ ಸಿನೆಮಾ. ನಮ್ಮ ಸಿನೆಮಾಗೆ ಯು ಪ್ರಮಾಣ ಪತ್ರ ಸಿಕ್ಕಿದೆ" ಎನ್ನುತ್ತಾರೆ. 
ಕಮರ್ಷಿಯಲ್ ಸಿನೆಮಾದ ಅವಶ್ಯಕತೆಗಳನ್ನು ಮತ್ತು ಸೃಜನಶೀಲತೆಯನ್ನು ಹೇಗೆ ಸಮತೋಲನ ಮಾಡುವಿರಿ ಎಂಬ ಪ್ರಶ್ನೆಗೆ "ಉದಾಹರಣೆಗೆ ರಜನಿಕಾಂತ್ ಶೈಲಿಯ ಸಿನೆಮಾಗಳನ್ನು ವಿಭಿನ್ನವಾಗಿ ಮಾಡಬೇಕು" ಎನ್ನುತ್ತಾರೆ ರಜನಿಕಾಂತ್ ಅವರ 'ಮುತ್ತು', 'ಪಡೆಯಪ್ಪ' ಮತ್ತು 'ಲಿಂಗಾ' ಸಿನೆಮಾಗಳನ್ನು ನಿರ್ದೇಶಿಸಿರುವ ರವಿಕುಮಾರ್. "ಆ ನಟ ಒಂದು ಶೈಲಿಯಲ್ಲಿ ಗುರುತಿಸಿಕೊಂಡಿರುತ್ತಾರೆ ಆದುದರಿಂದ ಅವರ ಸಿನೆಮಾದಲ್ಲಿ ನನ್ನ ಶೈಲಿಯನ್ನು ಸೇರಿಸಲು ಸಾಧ್ಯವಿಲ್ಲ. ಆದುದರಿಂದ ಅವರ ಶೈಲಿಗೆ ಹೊಂದಿಕೊಂಡು ಒಳ್ಳೆಯ ಸ್ಕ್ರಿಪ್ಟ್ ಜೊತೆಗೆ ಕೆಲಸ ಮಾಡಬೇಕು" ಎನ್ನುತ್ತಾರೆ. 
ಆದರೆ ಕಮರ್ಷಿಲ್ ಸಿನೆಮಾಗಳ ಶಕ್ತಿ ಕೇವಲ ಹೀರೋಗಳು ಎಂಬುದನ್ನು ಒಪ್ಪದ ಅವರು "'ಪಡೆಯಪ್ಪ' ಸಿನೆಮಾದಲ್ಲಿ ರಮ್ಯಕೃಷ್ಣ ನಟಿಸಿದ್ದ ನೀಲಾಂಬರಿ ಪಾತ್ರ ಅಷ್ಟೇ ಪ್ರಮುಖವಾದದ್ದು. ಕಮರ್ಷಿಲ್ ಸಿನೆಮಾಗಳಲ್ಲಿ ಹೀರೊ ಹೊರತಾದ ಪಾತ್ರಗಳು ಕೂಡ ಬಹಳ ಪ್ರಮುಖವಾದವು. ಹೀರೋಯಿನ್ ಕೇಂದ್ರಿತ ಪಾತ್ರಗಳ ಎಷ್ಟೋ ಸಿನೆಮಾಗಳು ತಮಿಳು ಮತ್ತು ತೆಲುಗಿನಲ್ಲಿ ಯಶಸ್ಸು ಕಂಡಿವೆ. ಉದಾಹರಣೆಗೆ ಕೆ ಬಾಲಚಂದರ್ ಸಿನಿಮಾಗಳನ್ನೇ ನೋಡಿ, ಅವುಗಳಲ್ಲಿ ಬಹುತೇಕ ಹೀರೋಯಿನ್ ಕೇಂದ್ರಿತ ಸಿನೆಮಾಗಳು" ಎನ್ನುತ್ತಾರೆ ರವಿ. 
ಕನ್ನಡ ಚಿತ್ರರಂಗಕ್ಕೆ ಬರಲು 25 ವರ್ಷಗಳನ್ನು ತೆಗೆದುಕೊಂಡದ್ದೇಕೆ ಎಂಬ ಪ್ರಶ್ನೆಗೆ "ಸಾಮಾನ್ಯವಾಗಿ ಕಮರ್ಷಿಯಲ್ ಸಿನೆಮಾ ರಂಗ ವಾಣಿಜ್ಯ ಉದ್ದಿಮೆ. ನಿರ್ದೇಶಕರು ಹೆಚ್ಚು ಹಣ ಇರುವ ಕಡೆಗೆ ಹೋಗುತ್ತಾರೆ. ತೆಲುಗು ಮತ್ತು ತಮಿಳು ಚಿತ್ರರಂಗ ದೊಡ್ಡ ಉದ್ದಿಮೆಗಳು ಮತ್ತು ಅಲ್ಲಿ ಸಿನೆಮಾ ಮಾಡಿದರೆ ಒಳ್ಳೆಯ ಗಳಿಕೆ ಸಾಮಾನ್ಯ. ಮೊದಲು ತಮಿಳು ಚಿತ್ರರಂಗ ತೆಲುಗಿಗಿಂತಲೂ ಸಣ್ಣದಾಗಿತ್ತು ಆದರೆ ವಿದೇಶಿ ಮಾರುಕಟ್ಟೆ ಮತ್ತು ಸ್ಯಾಟಲೈಟ್ ಹಕ್ಕುಗಳು ಬಂದಾಗ ಅದು ದೊಡ್ಡಾದಾಗಿ ಬೆಳೆಯಿತು" ಎನ್ನುತ್ತಾರೆ ರವಿಕುಮಾರ್. 
"ಈಗ ಕನ್ನಡ ಚಿತ್ರರಂಗ ಕೂಡ ಮೊದಲಿನಂತಲ್ಲ. ಮಾರುಕಟ್ಟೆ ದೊಡ್ಡದಾಗಿ ಬೆಳೆದಿದೆ ಮತ್ತು ಇನ್ನು ದೊಡ್ಡದಾಗಿ ಬೆಳೆಯುತ್ತಿದೆ.  ಈಗ ತಮಿಳು ಚಿತ್ರರಂಗದಲ್ಲಿ ಸಿಗುವ ಹಣವೇ ನನಗೆ ಇಲ್ಲಿಯೂ ಸಿಗುತ್ತಿದೆ" ಎಂದು ನಗುತ್ತಾ ಹೇಳುತ್ತಾರೆ. 
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಗೆ ಅವಕಾಶ ನೀಡಿದರೆ ಇನ್ನೂ ಎತ್ತರೆಯಕ್ಕೆ ಬೆಳೆಯುವ ಅವಕಾಶ ಇದೆ ಎನ್ನುವ ಅವರು "ನಾವು ಕನ್ನಡ ಸಿನೆಮಾಗಳನ್ನು ಕೂಡ ಇತರ ಮಾರುಕಟ್ಟೆಗಳಿಗೆ ಡಬ್ ಮಾಡಬೇಕು. ಮಾರುಕಟ್ಟೆ ವಿಸ್ತರಿಸಿಕೊಳ್ಳುವುದೇ ಹಾಗೆ. ಇದು ದ್ವಿಭಾಷಾ-ತ್ರಿಭಾಷಾ ಯೋಜನೆಗಳನ್ನು ನಿರ್ಮಿಸುವುದಕ್ಕೂ ಸಹಕಾರಿ ಮತ್ತು ತಂತ್ರಜ್ಞರಿಗೆ ದೊಡ್ಡ ವೇದಿಕೆಯನ್ನು ಸೃಷ್ಟಿಸುತ್ತದೆ" ಎಂದು ಮಾತು ಮುಗಿಸುತ್ತಾರೆ ರವಿಕುಮಾರ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com